ಕಾಂಗ್ರೆಸ್‌ ಪಕ್ಷದಲ್ಲಿ ದಲಿತರಿಗೆ ರಕ್ಷಣೆ ಇಲ್ಲ: ಮೂಡ್ನಕೂಡು ಪ್ರಕಾಶ್‌

KannadaprabhaNewsNetwork | Published : Jul 27, 2024 12:46 AM

ಸಾರಾಂಶ

ಡಿಸಿಎಂಗೆ ಹೆದರಿ ಕೈ ಕಳೆದುಕೊಂಡ ದಲಿತನಿಗೆ ಸಾಂತ್ವನ ಹೇಳಲು ದಲಿತ ಸಚಿವರು ಭೇಟಿ ನೀಡಿಲ್ಲ. ಕಾಂಗ್ರೆಸ್‌ ಪಕ್ಷದಿಂದ ದಲಿತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್‌ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಡಪ್ರಭ ವಾರ್ತೆ ಚಾಮರಾಜನಗರ

ಡಿಸಿಎಂಗೆ ಹೆದರಿ ಕೈ ಕಳೆದುಕೊಂಡ ದಲಿತನಿಗೆ ಸಾಂತ್ವನ ಹೇಳಲು ದಲಿತ ಸಚಿವರು ಭೇಟಿ ನೀಡಿಲ್ಲ. ಕಾಂಗ್ರೆಸ್‌ ಪಕ್ಷದಿಂದ ದಲಿತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್‌ ಹೇಳಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಕ್ಷೇತ್ರದ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್‌ನ ಎಡಗೈಯನ್ನು ಕತ್ತರಿಸಿದ ಹರ್ಷ ಹಾಗೂ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೂ ಕೂಡ ಕ್ಷೇತ್ರದ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಸೌಜನ್ಯಕ್ಕಾದರೂ ಕೈ ಕಳೆದುಕೊಂಡ ದಲಿತನಿಗೆ ಸಾಂತ್ವನ ಹೇಳಿಲ್ಲ. ಅಲ್ಲದೇ ಇಂತಹ ದುರ್ಘಟನೆ ನಡೆದಿದ್ದರೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಸಾಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಗ್ರಾಮಕ್ಕೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದರು.

ಸದನದಲ್ಲಿ ದಲಿತರ 25 ಸಾವಿರ ಕೋಟಿ ರು. ದುರ್ಬಳಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದರೆ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ನರೇಂದ್ರಸ್ವಾಮಿ ಪದೇ ಪದೇ ದಲಿತ ಪದವನ್ನು ಬಳಸಬೇಡಿ, ನನಗೆ ಕರುಳು ಚುರುಕ್ ಎನ್ನುತ್ತದೆ ಎನ್ನುತ್ತಾರೆ. ಈ ಮೂವರಿಗೆ ಇದೇ ನಿಮ್ಮ ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಕೈ ಕಳೆದುಕೊಂಡ ದಲಿತನ ಬಗ್ಗೆ ಕರುಳು ಚುರುಕ್ ಎನ್ನಲಿಲ್ಲವೇ? ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡದ ನಿಮ್ಮಿಂದ ದಲಿತರಿಗೆ ರಕ್ಷಣೆ ಸಿಗುವುದಿಲ್ಲ ಎಂದರು.

ಸಂವಿಧಾನ ರಕ್ಷಕರೆಂಬಂತೆ ಬಿಂಬಿಸಿಕೊಳ್ಳುವ ನೀವು ಒಬ್ಬ ಬಡ ದಲಿತನ ಕೈ ಕತ್ತರಿಸಿದ್ದರೂ ರಾಮನಗರದ ಚಾಮುಂಡಿತಾಯಿ ಸನ್ನಿಧಿಗೆ ಹೋಗಿ ರಾಜ್ಯದ ಜನರ ಒಳಿತಿಗೆ ಬೇಡಿಕೊಂಡಿದ್ದೀರಿ ಎಂದು ಹೇಳಿಕೆ ನೀಡಿದ್ದೀರಿ. ಆದರೆ ದಲಿತನ ಬರ್ಬರ ಹತ್ಯೆಗೆ ಹೊಂಚು ಹಾಕಿ ಕೈ ಕಳೆದುಕೊಂಡ ಇದೇ ಗ್ರಾಮದ ದಲಿತರು ಭಯಭೀತರಾಗಿರುವ ಸಂದರ್ಭದಲ್ಲಿ ಆ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ಆತ್ಮಸ್ಟೈರ್ಯ ತುಂಬಲಿಲ್ಲ, ಅಧಿಕಾರ ದಾಹಕ್ಕಾಗಿ ಸಂವಿಧಾನ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್‌ ಪಕ್ಷ ದಲಿತರಿಗೆ ದ್ರೋಹ ಮಾಡುತ್ತಿದೆ ಎಂದರು.

ದಲಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುತ್ತಿದ್ದ ಪ್ರೋತ್ಸಾಹ ದನ ರದ್ದು, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ನೀಡುತ್ತಿದ್ದ ಅನುದಾನ ರದ್ದು, ಇಲಾಖಾವಾರು ಎಸ್‌ಸಿಪಿ/ಟಿಎಸ್‌ಪಿ ಅನುದಾನ ರದ್ದು, ದಲಿತರಿಗೆ ಮೀಸಲಾಗಿದ್ದ ಅನೇಕ ಯೋಜನೆಗಳನ್ನ ರದ್ದುಮಾಡಿದ್ದೇ ನಿಮ್ಮ ಸಾಧನೆ ಎಂದರು.

ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಮತ್ತು ದಲಿತರಿಗೆ ರಕ್ಷಣೆ ನೀಡಲಾಗದ ಗೃಹಸಚಿವ ಡಾ.ಜಿ.ಪರಮೇಶ್ವರ್ ಈ ಮೂವರಿಗೆ ದಲಿತರ ಶಾಪ ತಟ್ಟದೇ ಇರುವುದಿಲ್ಲ. ದಲಿತರನ್ನು ಕಣ್ಣೀರು ಹಾಕಿಸಿದವರು ಉದ್ಧಾರ ಆದ ಉದಾಹರಣೆಗಳೇ ಇಲ್ಲ. ದೌರ್ಜನ್ಯಕ್ಕೆ ಒಳಗಾದವರ ಹಾಗೂ ವ್ಯಾಸಂಗದಿಂದ ವಂಚಿತರಾದವರ ಕಣ್ಣೀರು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದರು.

ದಲಿತರ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲು ಸಂದರ್ಭಗಳನ್ನ ಚೆನ್ನಾಗಿ ಬಳಸಿಕೊಂಡಿದ್ದೀರಿ. ಸಂವಿಧಾನ ಪೀಠಿಕೆಯನ್ನು ಮೆರವಣಿಗೆ ಮಾಡಿ 11.149 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿರಿ, ಮತ್ತೆ 14.5 ಸಾವಿರ ಕೋಟಿ ಬಳಕೆ ಮಾಡಿಕೊಳ್ಳಲು ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಿ ದಲಿತರನ್ನು ಯಾಮಾರಿಸಿದಿರಿ. 2 ಬಜೆಟ್ ನಿಂದ 25 ಸಾವಿರಕ್ಕೂ ಹಚ್ಚು ಅನುದಾನ ದುರ್ಬಳಕೆ ಮಾಡಿಕೊಂಡಿರಿ. ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಲಿತರಿಗೆ ರಕ್ಷಣೆಯಂತು ಮೊದಲೇ ಇಲ್ಲ ಅನುದಾನವಂತೂ ಕೊಡುವ ಪ್ರಶ್ನೆಯೇ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡಳ್ಳಿ ಮೂರ್ತಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಹೊಂಗನೂರು ಮಹದೇವಸ್ವಾಮಿ ಇದ್ದರು.

Share this article