ಎಚ್‌ಡಿಸಿಸಿ ಬ್ಯಾಂಕಿನಲ್ಲಿ ಯಾವ ನೇಮಕಾತಿಯೂ ನಡೆಯುತ್ತಿಲ್ಲ

KannadaprabhaNewsNetwork |  
Published : Jun 04, 2026, 01:30 AM IST
3ಎಚ್ಎಸ್ಎನ್17 :  | Kannada Prabha

ಸಾರಾಂಶ

ಮುಖ್ಯಮಂತ್ರಿಗಳ ಸೂಚನೆಯಂತೆ ಸಹಕಾರ ಇಲಾಖೆಯ ನಿಬಂಧಕರು ೨೦೧೯ರ ಅಕ್ಟೋಬರ್ ೨೫ರಂದು ಬ್ಯಾಂಕಿಗೆ ಪತ್ರ ಬರೆದು ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕಿನ ಆಡಳಿತ ಮಂಡಳಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಈ ಕಾರಣದಿಂದಾಗಿ ೨೦೧೮ರ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಪ್ರಕ್ರಿಯೆ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಚ್‌ಡಿಸಿಸಿ)ನಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಅಮಾಯಕರಿಗೆ ಉದ್ಯೋಗದ ಆಮಿಷ ಒಡ್ಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸಂಬಂಧ ಸಾರ್ವಜನಿಕರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳು ಎಚ್ಚರಿಕೆಯಿಂದ ಇರಬೇಕೆಂದು ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮಾಹಿತಿಯ ಪ್ರಕಾರ, ೨೦೧೮ರಲ್ಲಿ ವಿವಿಧ ದರ್ಜೆಯ ಒಟ್ಟು ೮೩ ಹುದ್ದೆಗಳ ನೇಮಕಾತಿಗಾಗಿ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರದಿಂದ ಅನುಮತಿ ಪಡೆದು ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿಯಲ್ಲಿ ೫೪ ಕಿರಿಯ ಸಹಾಯಕ, ೭ ಐಟಿ ಸೂಪರ್‌ವೈಸರ್‌ ಹಾಗೂ ೨೨ ಅಟೆಂಡರ್‌ ಹುದ್ದೆಗಳು ಸೇರಿದ್ದವು. ೨೦೧೮ರ ನವೆಂಬರ್ ೫ ರಂದು ಅಧಿಕೃತ ಅಧಿಸೂಚನೆ ಪ್ರಕಟಗೊಂಡ ಬಳಿಕ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಐಟಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ೫೧೬ ಅಭ್ಯರ್ಥಿಗಳಿಗೆ ೨೦೧೯ರ ಫೆಬ್ರವರಿ ೧೦ರಂದು, ಅಟೆಂಡರ್ ಹುದ್ದೆಗೆ ಅರ್ಹರಾದ ೨,೬೫೧ ಅಭ್ಯರ್ಥಿಗಳಿಗೆ ೨೦೧೯ರ ಜೂನ್ ೧೬ರಂದು ಹಾಗೂ ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ೩,೫೪೧ ಅಭ್ಯರ್ಥಿಗಳಿಗೆ ೨೦೧೯ರ ಜೂನ್ ೩೦ರಂದು ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪರೀಕ್ಷೆಗಳು ಪೂರ್ಣಗೊಂಡು ಮುಂದಿನ ಹಂತದ ಪ್ರಕ್ರಿಯೆಗಳು ಆರಂಭಗೊಳ್ಳಬೇಕಿದ್ದ ವೇಳೆ ಸರ್ಕಾರದ ಮಟ್ಟದಲ್ಲಿ ಬಂದ ನಿರ್ದೇಶನದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ವಿಧಿಸಲಾಗಿತ್ತು ಎಂದರು. ಮುಖ್ಯಮಂತ್ರಿಗಳ ಸೂಚನೆಯಂತೆ ಸಹಕಾರ ಇಲಾಖೆಯ ನಿಬಂಧಕರು ೨೦೧೯ರ ಅಕ್ಟೋಬರ್ ೨೫ರಂದು ಬ್ಯಾಂಕಿಗೆ ಪತ್ರ ಬರೆದು ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕಿನ ಆಡಳಿತ ಮಂಡಳಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಈ ಕಾರಣದಿಂದಾಗಿ ೨೦೧೮ರ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಮುಂದಿನ ಪ್ರಕ್ರಿಯೆ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೀಗ ಕೆಲವರು ಈ ಪರಿಸ್ಥಿತಿಯನ್ನೇ ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿರುವ ಬಗ್ಗೆ ಬ್ಯಾಂಕ್ ಗಮನಕ್ಕೆ ಬಂದಿದೆ. ಬ್ಯಾಂಕ್ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆಯುವುದು, ಅಧಿಕಾರಿಗಳ ಹೆಸರನ್ನು ಬಳಸುವುದು, ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ನಂಬಿಸುವುದು ಸೇರಿದಂತೆ ಹಲವು ರೀತಿಯ ವಂಚನೆಗಳು ನಡೆಯುತ್ತಿರುವ ಕುರಿತು ದೂರುಗಳು ದಾಖಲಾಗಿವೆ ಎಂದು ಹೇಳಿದರು.

ಬ್ಯಾಂಕಿನ ಲೆಟರ್‌ಹೆಡ್ ನಕಲಿ:

ಅದರಲ್ಲೂ ಕೆಲವರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಸಹಿಯನ್ನು ಸ್ಕ್ಯಾನ್ ಮಾಡಿ, ಬ್ಯಾಂಕಿನ ಲೆಟರ್‌ಹೆಡ್ ಅನ್ನು ನಕಲು ಮಾಡಿ ಬಳಸಿರುವುದು ಪತ್ತೆಯಾಗಿದೆ. ೨೦೨೪ರ ದಿನಾಂಕ ನಮೂದಿಸಿ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳಂತೆಯೇ ಕಾಣುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಭ್ಯರ್ಥಿಗಳಿಗೆ ಕಳುಹಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ದಾಖಲೆಗಳನ್ನು ನಂಬಿ ಹಲವರು ಗೊಂದಲಕ್ಕೀಡಾಗಿರುವುದರಿಂದ ಈ ಹೇಳಿಕೆ ಕೊಡಲಾಗುತ್ತಿದೆ. ಉದ್ಯೋಗದ ಹೆಸರಿನಲ್ಲಿ ಹಣ ಪಾವತಿಸುವುದು, ಮಧ್ಯವರ್ತಿಗಳ ಮಾತು ನಂಬುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ದಾಖಲೆಗಳನ್ನು ನಂಬುವುದು ಅಪಾಯಕಾರಿ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಹೊನ್ನವಳ್ಳಿ ಸತೀಶ್, ಉಪಾಧ್ಯಕ್ಷ ಶೇಖರ್‌, ಕಣದಹಳ್ಳಿ ಮಂಜೇಗೌಡ, ಕಬ್ಬಳ್ಳಿ ರಾಜಣ್ಣ, ಗಿರೀಶ್ ಚನ್ನವೀರಪ್ಪ, ದಿನೇಶ್, ಬಿದರಿಕೆರೆ ಜಯರಾಮ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ನಾಳೆಯಿಂದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ
ಬೇಲೂರಿನಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ