ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಮಂಗಳವಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಅನಿತಾಬಾಯಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಆಯೋಜನೆಗೊಂಡಿತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದಾಗಿದೆ. ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿರುವುದು, ಕೆಟ್ಟುಹೋಗಿರುವ ಟ್ರಾನ್ಸ್ ಫಾರ್ಮರ್‌ಗಳು, ಜೋತುಬಿದ್ದ ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳಿಗೆ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿರುವುದು, ವಿದ್ಯುತ್ ಕಳ್ಳತನ, ಮರಗಳನ್ನು ಕಡಿಯುವುದಕ್ಕೆ ಕಂಬಗಳನ್ನು ತೆರವುಗೊಳಿಸದಿರುವುದು ಹೀಗೆ ನೂರಾರು ಸಮಸ್ಯೆಗಳು ರೈತರನ್ನು ಬಾಧಿಸುತ್ತಿದ್ದರೂ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಸೂಚಿಸುವಲ್ಲಿ ವಿಫಲರಾಗಿರುವುದು ಕಂಡುಬಂದಿತು.ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದ ಕೆಲವೇ ರೈತರು ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಹಣ ವಸೂಲಿ, ಮೀಟರ್ ಕಳುವಾಗಿರುವ ಬಗ್ಗೆ ರೈತನಿಗೆ ತಿಳಿಸಿ ಮತ್ತೆ ಮೀಟರ್ ವಾಪಸ್ ನೀಡಿರುವುದು, ಲೈನ್‌ಮನ್ ಅಕ್ರಮವಾಗಿ ಸ್ವಂತ ಗುತ್ತಿಗೆ ಕೆಲಸ ನಿರ್ವಹಿಸುತ್ತಿರುವುದು, ವಿದ್ಯುತ್ ಕಂಬ ಸ್ಥಳಾಂತರಿಸದಿರುವುದು, ವಿದ್ಯುತ್ ಕಂಬವನ್ನು ಹಣಕ್ಕಾಗಿ ಮಾರಾಟ ಮಾಡುವುದು, ಟ್ರಾನ್ಸ್ ಫಾರ್ಮರ್‌ನಲ್ಲಿನ ಎಲ್‌ಟಿ ಕಿಟ್ ಕೆಟ್ಟರೆ ವೈರ್ ಹಾಕುವುದಕ್ಕೆ ಒಂದು ಟ್ರಾನ್ಸ್ ಫಾರ್ಮರ್‌ಗೆ 5 ಸಾವಿರ ರು. ಹಣ ವಸೂಲಿ ಸೇರಿದಂತೆ ಅನೇಕ ದೂರುಗಳನ್ನು ನಿಗಮದ ಅಧಿಕಾರಿಗಳ ಗಮನಕ್ಕೆ ತಂದರು.
ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಗದೀಶ್ ಅವರಿಂದ 6 ಸಾವಿರ ರು.ನಿಂದ 8 ಸಾವಿರ ರು.ವರೆಗೆ ಹಣ ಪಡೆದ ಕಾರ್ತಿಕ್ ಯಾವುದೋ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ್ದರು. ನಂತರದ ದಿನಗಳಲ್ಲಿ ನಿಗಮದ ಸಹಾಯಕ ಎಂಜಿನಿಯರ್ ಸೂನಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಜಗದೀಶ್ ಅವರು ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ಮೀಟರ್‌ಗೆ ಪ್ರತಿ ಮಾಹೆ ಬಿಲ್ ಬರುತ್ತಿಲ್ಲವೆಂಬ ಸಂಗತಿಯನ್ನು ಗಮನಕ್ಕೆ ತಂದರು. ಅದಕ್ಕೆ ಎಂಜಿನಿಯರ್ ಅವರು ಮೀಟರ್ ಖರೀದಿಸಿರುವ ಬಿಲ್ ನೀಡುವಂತೆ ಕೇಳಿದರು.
ಮಂಡ್ಯ ತಾಲೂಕು ತಗ್ಗಹಳ್ಳಿ ಶಾಖೆಯ ಸಹಾಯಕ ಲೈನ್‌ಮೆನ್ ಕಾರ್ತಿಕ್ ಅಕ್ರಮವಾಗಿ ಮತ್ತು ಸ್ವಂತ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆ ಗಮನಕ್ಕೆ ಬಾರದ ರೀತಿಯಲ್ಲಿ ತಾನೇ ಗುತ್ತಿಗೆ ತೆಗೆದುಕೊಂಡು ವಿದ್ಯುತ್ ಕಂಬ ಸ್ಥಳಾಂತರ ಮಾಡುವುದು, ಟ್ರಾನ್ಸ್ ಫಾರ್ಮರ್ ಕೆಟ್ಟರೆ ಎಂಜಿನಿಯರ್‌ಗಳಿಗೆ ಹಣ ಕೊಡಬೇಕೆಂದು 5 ಸಾವಿರ ರು.ವರೆಗೆ ಹಣ ವಸೂಲಿ ಮಾಡುತ್ತಿರುವುದನ್ನು ಸೂನಗಹಳ್ಳಿ, ಭೂತನಹೊಸೂರು, ಹೆಮ್ಮಿಗೆ, ಕಬ್ಬನಹಳ್ಳಿ ಗ್ರಾಮಸ್ಥರು ಸಾಕ್ಷ್ಯಾಧಾರಗಳ ಮುಖಾಂತರ ಅಧಿಕಾರಿಗಳ ಗಮನಕ್ಕೆ ತಂದರು.
ಇದರ ನಡುವೆಯೂ ಎಚ್.ಎಂ.ಕಾರ್ತಿಕ್ ಎಂಬಾತನಿಗೆ ಕಿರಿಯ ಲೈನ್‌ಮನ್ ಹುದ್ದೆಯಿಂದ ಸಹಾಯಕ ಲೈನ್‌ಮನ್ ಹುದ್ದೆಗೆ ಪದೋನ್ನತಿ ನೀಡಿರುವುದು ನಿಗಮದ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
- ಎಚ್.ಡಿ.ಕೃಷ್ಣ, ರೈತ, ಹೆಮ್ಮಿಗೆಆಲೆಮನೆಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವುದಿಲ್ಲ. ವಿದ್ಯುತ್ ಕಡಿತಗೊಳಿಸುವ ಬಗ್ಗೆ ಮುಂಚಿತವಾಗಿ ತಿಳಿಸುವುದೂ ಇಲ್ಲ. ಇದ್ದಕ್ಕಿದ್ದಂತೆ ವಿದ್ಯುತ್ ಲೈನ್‌ಗಳನ್ನು ಬಿಚ್ಚುವುದು, ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುವುದು. ಅಧಿಕಾರಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಳ್ಳುವುದು ನಡೆದೇ ಇದೆ. ಇದರ ಬಗ್ಗೆ ದೂರುಗಳನ್ನು ಸಲ್ಲಿಸುತ್ತಿದ್ದರೂ ಪ್ರಯೋಜನ ಮಾತ್ರ ಆಗುತ್ತಿಲ್ಲ.