ಗುಣಮಟ್ಟದ ನಾಟಕಗಳಿಗೆ ಪ್ರೇಕ್ಷಕರ ಕೊರತೆಯಾಗಲ್ಲ: ರಾಜಣ್ಣ ಜೇವರ್ಗಿ

KannadaprabhaNewsNetwork |  
Published : Mar 28, 2025, 12:30 AM IST
ಕೊಟ್ಟೂರಿನಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ರಾಜ್ಯದಲ್ಲಿರುವ ಎಲ್ಲ ನಾಟಕ ಕಂಪನಿಯವರು ಉತ್ತಮ ಕಥೆ, ಸಂಭಾಷಣೆಯಿರುವ ಗುಣಮಟ್ಟ ನಾಟಕಗಳನ್ನು ಪ್ರದರ್ಶಿಸಿದರೆ ಅದಕ್ಕೆ ಪ್ರೇಕ್ಷಕರು ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಾರೆ.

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ನಾಟಕ ಅಕಾಡೆಮಿ ಸದಸ್ಯ

ಕನ್ನಡಪ್ರಭ ವಾರ್ತೆ ಕೊಟ್ಟೂರು

ರಾಜ್ಯದಲ್ಲಿರುವ ಎಲ್ಲ ನಾಟಕ ಕಂಪನಿಯವರು ಉತ್ತಮ ಕಥೆ, ಸಂಭಾಷಣೆಯಿರುವ ಗುಣಮಟ್ಟ ನಾಟಕಗಳನ್ನು ಪ್ರದರ್ಶಿಸಿದರೆ ಅದಕ್ಕೆ ಪ್ರೇಕ್ಷಕರು ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಾರೆ ಎಂದು ರಾಜ್ಯ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ ಹೇಳಿದರು.

ಪಟ್ಟಣದಲ್ಲಿ ಗದಗಿನ ಶ್ರೀ ಗುರು ಪುಟ್ಟರಾಜ ನಾಟ್ಯ ಸಂಘ ಮತ್ತು ಚಿತ್ತರಗಿಯ ಶ್ರೀಕುಮಾರ ವಿಜಯ ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಹೆಚ್ಚುತ್ತಿರುವ ವೆಚ್ಚ, ಕಡಿಮೆ ಆದಾಯ, ಕಲಾವಿದರ ಮತ್ತು ಪ್ರೇಕ್ಷಕರ ಕೊರತೆ ಕಾರಣಕ್ಕಾಗಿ ನೂರರ ಅಂಕಿಯಲ್ಲಿದ್ದ ನಾಟಕ ಕಂಪನಿಗಳು ಇಂದು ಎರಡಂಕಿಗೆ ನಿಂತಿವೆ. ರಾಜ್ಯದಲ್ಲಿರುವ ೨೬ ನಾಟಕ ಕಂಪನಿಗಳು ಸರ್ಕಾರದಿಂದ ವಾರ್ಷಿಕ ಅನುದಾನ ಪಡೆಯುತ್ತಿವೆಯಾದರೂ ಕಂಪನಿಗಳಿಗೆ ಹೊಸ ಯುವ ಕಲಾವಿದರು ಸೇರ್ಪಡೆಯಾಗುತ್ತಿಲ್ಲ. ಇದರಿಂದ ಹೊಸ ನಾಟಕಗಳನ್ನು ಪ್ರದರ್ಶಿಸಲು ಕಲಾವಿದರ ಕೊರತೆಗೂ ಕಾರಣವಾಗಿದೆ. ಕಂಪನಿಗಳಲ್ಲಿ ಕಲಾವಿದರಿಗೆ ಉತ್ತಮ ಸಂಭಾವನೆ ಸಿಗುತ್ತಿದ್ದು, ಒಳ್ಳೆಯ ಅಭಿನಯ ನೀಡಿದರೆ ಹೆಸರು ಸಂಪಾದನೆ ಮಾಡಬಹುದು. ಕಂಪನಿಯ ಕಲಾವಿದರು ಒಗ್ಗಟ್ಟಾಗಿರಬೇಕು. ಉತ್ತಮ ಅಭಿನಯದಿಂದ ಹೆಸರು ಪಡೆದು ಕಂಪನಿ ಹೆಸರು ಬೆಳಸಬೇಕು. ಯಾವುದೇ ಕಂಪನಿಯವರು ಉತ್ತಮ ಹಾಗೂ ಗುಣಮಟ್ಟದ ನಾಟಕ ಪ್ರದರ್ಶಿಸಿದರೆ ಅದಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡುವುದು ಖಚಿತ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಶ್ರೀಕಂಠೇಶ ಚಿಂದೋಡಿ ಮಾತನಾಡಿ, ನಾಟಕ ಕಂಪನಿಯವರು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ನಾಟಕ ಕಂಪನಿಗಳ ಬಗ್ಗೆ ಹೊಂದಿರುವ ಮಲತಾಯಿ ಧೋರಣೆ ಬಿಟ್ಟು, ಕಂಪನಿಗಳ ಉಳಿವಿಗೆ ಯೋಜನೆ ರೂಪಿಸಬೇಕು. ರಂಗಭೂಮಿ ಕುರಿತಾದ ಚಿಂತನೆಗಳನ್ನು ರೂಪಿಸಲು ಎಸಿ ಕೊಠಡಿಯಲ್ಲಿ ಕುಳಿತ ಅಧಿಕಾರಿಗಳಿಂದ ಸಾಧ್ಯವಿಲ್ಲ. ಕಲಾವಿದರ ಸಮಸ್ಯೆಗಳನ್ನು ಅರಿತು ಕಲಾವಿದರ, ಕಂಪನಿಗಳ ಉಳಿವಿಗಾಗಿ ಯೋಜನೆಗಳನ್ನು ರೂಪಿಸುವುದು ಅವಶ್ಯವಿದೆ ಎಂದರು.

ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಮತ್ತಿಹಳ್ಳಿ ಪ್ರಕಾಶ, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಚಿತ್ರನಟ ಪಿ.ಸುಧಾಕರಗೌಡ ಪಾಟೀಲ, ಶ್ರೀ ಕೊಟ್ಟೂರೇಶ್ವರ ಕಲಾರಂಗ ಅಧ್ಯಕ್ಷ ಎಂ.ಎಸ್. ಶಿವನಗುತ್ತಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ, ಚಿತ್ತರಗಿ ಕಂಪನಿ ಮಾಲೀಕ ಮಂಜನಾಥ ಜಾಲಿಹಾಳ, ಕಮತಗಿ ಕಂಪನಿಯ ಮಾಲೀಕ ಪಾಪು ಕಲ್ಲೂರು, ಕಲಾವಿದ ಎಚ್.ಎಂ. ಅಶೋಕ ಕೋಗಳಿ ಮಾತನಾಡಿದರು.

ಇದೇ ಸಂದರ್ಭ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ಬಿ.ಸಿದ್ದಲಿಂಗಪ್ಪ, ದೇವರಮನಿ ಕೊಟ್ರೇಶ್, ರಂಗ ನಿರ್ದೇಶಕ ಕೋಗಳಿಯ ಎಚ್.ಎಂ.ಶಂಕ್ರಯ್ಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾಗಿ ದೇವರಮನಿ ಕೊಟ್ರೇಶ್ ಮಾತನಾಡಿದರು.

ಕಲಾವಿದ ಎಚ್.ಎಂ. ಶಂಕರಯ್ಯ ಮತ್ತು ಸಿ.ಪ್ರಶಾಂತರಿಂದ ರಂಗ ಗೀತೆಗಳ ಗಾಯನ ಮತ್ತು ಕಂಪನಿ ಕಲಾವಿದರಾದ ದಯಾನಂದ ಬೀಳಗಿ, ಪಾಪು ಕಲ್ಲೂರು, ಪೃಥ್ವಿರಾಜ ಬಾದಾಮಿ, ವಿಜಯ ಮಹಾಂತೇಶ ಜಾಲಿಹಾಲ ಕಿವುಡ ಮಾಡಿದ ಕಿತಾಪತಿ, ಮಿ.ಗುಂಡೂರಾವ್ ನಾಟಕದ ಹಾಸ್ಯ ಸನ್ನಿವೇಶ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!