ಕದ್ದುಮುಚ್ಚಿ ಸಾಗುವಳಿ ಚೀಟಿ ನೀಡುವ ಸಂಪ್ರದಾಯವಿಲ್ಲ: ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork |  
Published : Feb 05, 2025, 12:32 AM IST
ಸೂಲಿಬೆಲೆ ಹೋಬಳಿ ಮಟ್ಟದ ದರಖಾಸ್ತು ಪೋಡಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ತಹಶೀಲ್ದಾರ್ ಸೋಮಶೇಖರ್, ಬಿ.ಎನ್.ಗೋಪಾಲಗೌಡ ಇತರರು ಇದ್ದರು. | Kannada Prabha

ಸಾರಾಂಶ

ಹೊಸಕೋಟೆ ತಾಲೂಕಿನ ಪೋಡಿಗೆ ಸಂಬಂಧಪಟ್ಟ 5250 ಪ್ರಕರಣಗಳಲ್ಲಿ 4300 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಶೀಘ್ರವಾಗಿ ಇತರೆ ಪ್ರಕರಣಗಳನ್ನು ಮುಗಿಸಿಕೊಡುತ್ತೇವೆ ಹಾಗೂ ಶಾಸಕರ ಆಶಯದಂತೆ ಇಲಾಖೆ ಸೇವೆ ನೀಡುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ದೇಶದ ಬೆನ್ನೆಲುಬು ರೈತಾಪಿ ವರ್ಗಕ್ಕೆ ಸಾಗುವಳಿ ಚೀಟಿಗಳನ್ನು ಕದ್ದುಮುಚ್ಚಿ ನೀಡುವ ಸಂಪ್ರದಾಯಗಳು ಇರುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಸೂಲಿಬೆಲೆ ಹೋಬಳಿ ಮಟ್ಟದ ದರಖಾಸು ಪೋಡಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ರಾಜಕಾರಣಿಗಳು ಜಾತಿ, ಪಕ್ಷ ಕೇಳಿ ರಾಜಕಾರಣ ಮಾಡುತ್ತಿದ್ದರು, ಸಾಗುವಳಿ ಚೀಟಿಗಳನ್ನು ರಾತ್ರಿ ಸಮಯದಲ್ಲಿ ಕದ್ದು ಮುಚ್ಚಿ ವಿತರಣೆ ಮಾಡಲಾಗುತ್ತಿತ್ತು, ಅಂತಹ ಸಂಪ್ರದಾಯಗಳು ಇನ್ನು ಮುಂದೆ ನಡೆಯಲು ಬಿಡುವುದಿಲ್ಲ, ಎಲ್ಲವೂ ಬಹಿರಂಗವಾಗಿಯೇ ನಡೆಯುತ್ತದೆ. ರೈತರ ಹಕ್ಕುಗಳು ರೈತರ ಕುಟುಂಬಕ್ಕೆ ಸೇರುತ್ತವೆ. ಸೂಲಿಬೆಲೆ ಹೋಬಳಿ ವ್ಯಾಪ್ತಿಯ 187 ಎಕರೆ ಪ್ರದೇಶವನ್ನು 202 ಫಲಾನುಭವಿಗಳಿಗೆ ಪೋಡಿ ಮೂಲಕ ಹಕ್ಕು ನೀಡಲಾಗಿದೆ ಎಂದು ತಿಳಿಸಿದರು. ಹೊಸಕೋಟೆ ತಾಲೂಕಿನ 5 ಹೋಬಳಿಗಳಲ್ಲಿ ಪ್ರತಿ ತಿಂಗಳಿಗೊಮ್ಮೆ, ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡುವ ಜವಾಬ್ದಾರಿಯನ್ನು ತಾಲೂಕು ದಂಡಾಧಿಕಾರಿಗಳು ನಿಭಾಯಿಸಬೇಕು ಎಂದು ಸೂಚನೆ ನೀಡಿದರು.

ಹೊಸಕೋಟೆ ತಾಲೂಕು ದಂಡಾಧಿಕಾರಿ ಸೋಮಶೇಖರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಕಂದಾಯ ಇಲಾಖೆಯ ನೂತನ 15 ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದು, ಪ್ರತಿ ರೈತನ ಮನೆ ಬಾಗಿಲಿಗೆ ಸೇವೆಗಳನ್ನು ಕೊಡುವುದು ನಮ್ಮ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕನ್ನು ಪೋಡಿ ಮುಕ್ತ ತಾಲೂಕಾಗಿ ಮಾಡಲು ಎಲ್ಲಾ ಆಧಿಕಾರಿಗಳು ಶ್ರಮಿಸಿ ಮಾದರಿ ತಾಲೂಕು ಮಾಡುತ್ತೇವೆ ಎಂದರು.

ಹೊಸಕೋಟೆ ತಾಲೂಕಿನ ಪೋಡಿಗೆ ಸಂಬಂಧಪಟ್ಟ 5250 ಪ್ರಕರಣಗಳಲ್ಲಿ 4300 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಶೀಘ್ರವಾಗಿ ಇತರೆ ಪ್ರಕರಣಗಳನ್ನು ಮುಗಿಸಿಕೊಡುತ್ತೇವೆ ಹಾಗೂ ಶಾಸಕರ ಆಶಯದಂತೆ ಇಲಾಖೆ ಸೇವೆ ನೀಡುತ್ತದೆ ಎಂದರು.

ತಾಲೂಕು ಪಂಚಾಯತ್ ಇಒ ಡಾ.ನಾರಾಯಣಸ್ವಾಮಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿನ ಇ- ಸ್ವತ್ತುಗಳನ್ನು ತ್ವರಿತವಾಗಿ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ಗ್ರಾಪಂ.ಅಧ್ಯಕ್ಷೆ ನರಸಮ್ಮ ನ ರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಡಿ.ಟಿ.ವೆಂಕಟೇಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂತೋಷ್, ಲಕ್ಕೊಂಡಹಳ್ಳಿ ಮಂಜುನಾಥ್, ಗುಳ್ಳಹಳ್ಳಿ ಮುನಿಯಪ್ಪ, ಸೂಲಿಬೆಲೆ ನಾಡಕಚೇರಿ ಉಪತಹಸೀಲ್ದಾರ್ ಚೈತ್ರ, ರಾಜಸ್ವನೀರಿಕ್ಷಕ ಜ್ಞಾನಮೂರ್ತಿ,ಹಸಿಗಾಳ ಜಗದೀಶ್ ಹಾಗೂ ಇತರರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ