ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿ ಮೂಲ ದೇವಾನು ದೇವತೆಗಳಿಗೆ ಕ್ಷೌರಿಕನಾಗಿದ್ದರಿಂದ ಕ್ಷೌರಿಕರ ಮೂಲ ಪುರುಷನಾಗಿದ್ದಾರೆ. ಇಂತಹ ಮಹಾತ್ಮರ ಸಮುದಾಯದವರು ಶಿಕ್ಷಣ ಪಡೆಯುವುದರ ಜೊತೆಗೆ ವೃತ್ತಿಯಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಕೆ ಸಹ ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಮಾತನಾಡಿ, ಸೂರ್ವಿತ ಎಂಬುದು ಸೂರ್ಯನಿಗೆ ಕರೆಯುವ ಹೆಸರಾಗಿದ್ದು, ಸೂರ್ಯ ತನ್ನ ಪಥ ಬದಲಿಸಿ ಬರುವ ಈ ದಿನ ರಥಸಪ್ತಮಿ ಆಗಿದ್ದು, ಅಂದೇ ಸವಿತಾ ಮಹರ್ಷಿ ಅವತರಿಸಿದ್ದಾರೆ. ಬ್ರಹ್ಮನ ನಾಭಿಯಿಂದ ಹುಟ್ಟಿದ ಋಷಿಯಾಗಿದ್ದರಿಂದ ಈ ಸಮಾಜದವರಿಗೆ ನಾವಿಕರು ಎಂದು ಕರೆಯುವರು. ಅಲ್ಲದೆ ಶಿವನ ಕ್ಷೌರ ಮಾಡಿ ಶಿವನಿಗೆ ತುಂಬಾ ಹತ್ತಿರವಾದವರಾದವರು ಸವಿತಾ ಮಹರ್ಷಿ ಮನುಷ್ಯ ಪಾಪ ಕರ್ಮಗಳ ಪ್ರತೀಕವಾಗಿ ಕೂದಲುಗಳು ಬೆಳೆಯುತ್ತಿದ್ದರಿಂದ ದೇವಸ್ಥಾನಗಳಿಗೆ ಮುಡಿಕೊಡುವ ಪದ್ಧತಿ ಇದ್ದು, ಇಂದಿಗೂ ಪ್ರಸ್ತುತಿ ಇದೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಮಾಡಲಾರರು ಎಂಬ ನಾನ್ನುಡಿ ಪ್ರತಿಯೊಬ್ಬರೂ ಗಮನಿಸಿ ಇತಿಹಾಸ ಅರಿವ ಕಾರ್ಯವಾಗಬೇಕು. ಸವಿತಾ ಮಹರ್ಷಿಯಂತಹ ಸಮುದಾಯದವರು ಅವರ ಆಚರಣೆ, ಉದ್ದೇಶ ಹಾಗೂ ಮೌಲ್ಯವನ್ನು ಅರಿತಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೂ ಸ್ವಾರ್ಥಕತೆವಾಗುತ್ತದೆ. ಆಯುರ್ವೇದದಲ್ಲಿ ಪರಿಣತಿ ಹೊಂದಿದ ಶಿವನ ಹತ್ತಿರ ಆದವರು ಹಾಗೂ ಸಂಗೀತದಲ್ಲಿ ಒಲವು ಹೊಂದಿದವರು ಸವಿತಾ ಮಹರ್ಷಿ ಎಂದರು.
ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯದ ಮುಖಂಡರಾದ ಶರಣಬಸಪ್ಪ ಶಹಾಪೂರ, ಗಣೇಶ ಶಹಾಪೂರ, ರೇಖಾ ಇದ್ದರು.