ಬಾರದ ಭದ್ರಾ ನೀರು, ನಾಲೆಗಿಳಿದು ರೈತರ ಧರಣಿ

KannadaprabhaNewsNetwork | Published : Feb 22, 2024 1:46 AM

ಸಾರಾಂಶ

ದಾವಣಗೆರೆ ತಾಲೂಕು ಕುಕ್ಕವಾಡ ಗ್ರಾಮದ ಬಳಿ ಭದ್ರಾ ಜಲಾಶಯದಿಂದ ನೀರು ಹರಿಸಿ ನಾಲ್ಕೈದು ದಿನವಾದರೂ ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ಒಂದೇ ಒಂದು ಹನಿ ನೀರು ಸಹ ಬಂದಿಲ್ಲವೆಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಖಾಲಿ ನಾಲೆಗಿಳಿದು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಜಲಾಶಯದಿಂದ ನೀರು ಹರಿಸಿ ನಾಲ್ಕೈದು ದಿನವಾದರೂ ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ಒಂದೇ ಒಂದು ಹನಿ ನೀರು ಸಹ ಬಂದಿಲ್ಲವೆಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಒಕ್ಕೂಟದ ನೇತೃತ್ವದಲ್ಲಿ ತಾಲೂಕಿನ ಕುಕ್ಕವಾಡ ಬಳಿ ಒಣಗಿ ನಿಂತಿರುವ ಭದ್ರಾ ನಾಲೆಗಿಳಿದು ರೈತರು ಪ್ರತಿಭಟಿಸಿದರು.

ತಾಲೂಕಿನ ಕುಕ್ಕವಾಡದ ಬಳಿ ಶಾಖಾ ನಾಲೆ 2ನೇ ವಲಯದಲ್ಲಿ ನಾಲೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ವಿ.ಪಟೇಲ್ ಇತರರ ನೇತೃತ್ವದಲ್ಲಿ ಒಂದು ಹನಿಯೂ ನೀರಿಲ್ಲದೇ ಒಣಗಿದ್ದ ಭದ್ರಾ ನಾಲೆಗೆ ಇಳಿದ ರೈತರು ಸಮರ್ಪಕವಾಗಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಘೋಷಣೆ ಕೂಗುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ತೇಜಸ್ವಿ ವಿ.ಪಟೇಲ್, ಭದ್ರಾ ಅಣೆಕಟ್ಟೆಯಿಂದ ಕಳೆದ ಬಾರಿ ಬಿಟ್ಟಿದ್ದ ನೀರೇ ತಲುಪಿರಲಿಲ್ಲ. ಈಗ ನಾಲ್ಕೈದು ದಿನಗಳ ಹಿಂದೆ ನಾಲೆಗಳಿಗೆ ನೀರು ಬಿಟ್ಟಿದ್ದರೂ ಇನ್ನೂ ಒಂದೇ ಒಂದು ಹನಿ ನೀರು ಸಹ ನಮ್ಮ ಭಾಗಕ್ಕೆ ತಲುಪಿಲ್ಲ. ಹೀಗಾದರೆ ಅಚ್ಚುಕಟ್ಟು ಪ್ರದೇಶದ ರೈತರು ಏನು ಮಾಡಬೇಕು? ದಾವಣ ಗೆರೆ ಶಾಖಾ ನಾಲೆ 2ನೇ ವಲಯಕ್ಕೆ ನೀರು ಬಂದಿಲ್ಲ. ಹೀಗಾದರೆ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ದಿನದಿನಕ್ಕೂ ಬೆಳೆಗಳು ಒಣಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ. ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ರೈತರ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬಾರದು. ಮಕ್ಕಳಿಗಿಂತಲೂ ಹೆಚ್ಚಾಗಿ ತೋಟಗಳನ್ನು ರೈತರು ನೋಡಿಕೊಂಡು ಬಂದಿದ್ದಾರೆ. ಸಾಲ ಮಾಡಿ, ಕೊ‍ಳವೆ ಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಅಂತರ್ಜಲ ಖಾಲಿಯಾಗಿ ಬರಿದಾಗುತ್ತಿವೆ. ಭದ್ರಾ ನಾಲೆಗೆ ನೀರು ಹರಿದರಷ್ಟೇ ರೈತರ ಸಮಸ್ಯೆಗಳು ಒಂದಿಷ್ಟು ಕೊನೆಗಾಣಬಹುದು ಎಂದು ಅವರು ಹೇಳಿದರು.

ನೀರಿನ ಸಮಸ್ಯೆಯೆಂಬುದು ಇದ್ದಕ್ಕಿದ್ದಂತೆಯೇ ಸೃಷ್ಟಿಯಾಗುವಂತಹದ್ದಲ್ಲ. ಭದ್ರಾ ಅಣೆಕಟ್ಟೆಯ ನೀರು ಸಂಗ್ರಹ ಅವಲಂಬಿಸಿ, ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆ ಕಾಲದ ನೀರಾವರಿ ವೇಳಾಪಟ್ಟಿಯನ್ನು ನಿಗದಿಪಡಿಸಬೇಕಾಗುತ್ತದೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಮೌನ ವಹಿಸಿದ್ದರಿಂದಲೇ ಇಂದು ಅಚ್ಚುಕಟ್ಟು ರೈತರು ಸಂಕಷ್ಟ ಎದುರಿಸುವಂತಾಗಿದೆ. ಭದ್ರಾ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಫೆ.22ರಂದು ಟ್ರ್ಯಾಕ್ಟರ್‌ ಸಮೇತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಅವರು ಎಚ್ಚರಿಸಿದರು.

ಸಂಘದ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಷಣ್ಮುಖಸ್ವಾಮಿ, ರೈತ ಒಕ್ಕೂಟದ ಬಿ.ಎಂ.ಸತೀಶ ಕೊಳೇನಹಳ್ಳಿ, ವಕೀಲ ಮತ್ತಿ ಹನುಮಂತಪ್ಪ, ದಿಳ್ಯಪ್ಪ ಮುದಹದಡಿ, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಕಲ್ಲೇಶಪ್ಪ, ಅರವಿಂದ, ದಿನೇಶ, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ, ಹರೀಶ, ಜಿ.ಸಿ.ಮಂಜುನಾಥ, ಗಂಗಾಧರ ಇತರರು ಇದ್ದರು.

ಧರಣಿ ನಮ್ಮ ದೌರ್ಬಲ್ಯ ಅಲ್ಲ!

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ರೈತರ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿರುವುದು ಆಡಳಿತ ಸರ್ಕಾರಗಳ ರೈತ ವಿರೋಧಿ ನೀತಿ, ಧೋರಣೆಯನ್ನು ಬಿಂಬಿಸುತ್ತಿದೆ. ಒಣಗುತ್ತಿರುವ ಬೆಳೆಗಳಿಂದಾಗಿ ಜಿಲ್ಲೆಯ ರೈತರು ವಿಶೇಷವಾಗಿ ಭದ್ರಾ ಅಚ್ಚುಕಟ್ಟು ರೈತರು ಕಂಗಾಲಾಗಿದ್ದಾರೆ. ರೈತರ ಶಾಂತಿಯುತ ಹೋರಾಟ, ಧರಣಿಯನ್ನು ದೌರ್ಬಲ್ಯ ಅಲ್ಲ. ಸಾಂವಿಧಾನಿಕ ಚೌಕಟ್ಟಿನಲ್ಲಿ ರೈತರ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ, ಅದೇ ಅನ್ನದಾತ ರೈತರ ಹೋರಾಟವು ತೀವ್ರ ಸ್ವರೂಪ ಪಡೆದೀತು ಎಂದು ತೇಜಸ್ವಿ ವಿ.ಪಟೇಲ್ ಗುಟುರು ಹಾಕಿದರು.

Share this article