ಕನ್ನಡಪ್ರಭ ವಾರ್ತೆ ವಿಜಯಪುರ
ಮಾರುಕಟ್ಟೆಯಲ್ಲಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೀದಿ ದೀಪ ಅಳವಡಿಸಲಾಗಿದೆ, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ದೇಶದಲ್ಲಿ ವಿಜಯಪುರ ಅತ್ಯುತ್ತಮ ವಾತಾರಣ ಇರುವ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿರುವುದೇ ಸಾಕ್ಷಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಸೋಮವಾರ ವ್ಯಾಪಾರಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಮುಂದೆಯೂ ಕೂಡ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು, ಪ್ರತಿ ನಾಲ್ಕೈದು ಅಂಗಡಿಗಳ ಮಧ್ಯ ಕಸದ ಡಬ್ಬಿ ಇಟ್ಟು, ಎರಡು ದಿನಕ್ಕೊಮ್ಮೆ ತೆಗೆದುಕೊಂಡು ಹೋಗಲು ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ, ಸೂಕ್ತವಾದ ನಿಗದಿತ ಸ್ಥಳಾವಕಾಶ ಕಲ್ಪಿಸಿ, ಅಂಗಡಿಕಾರರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಸುಮಾರು 35 ಕಡೆ ತರಕಾರಿ ಮಾರುಕಟ್ಟೆ ಮಾಡಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಆಗಿದ್ದು, ಸಂಚಾರಕ್ಕೆ ಅಡೆತಡೆ ಆಗುತ್ತಿಲ್ಲ. ನಗರದ ಸುತ್ತಮುತ್ತಲಿನ ರೈತರು ಕಾಯಿಪಲ್ಲೆ ಮಾರಾಟ ಮಾಡಲು ಹಾಗೂ ಸಾರ್ವಜನಿಕರಿಗೆ ತಾಜಾ ಮತ್ತು ಸಮೀಪಲ್ಲೇ ಕಾಯಿಪಲ್ಲೆ ಸಿಗುವಂತಾಗಿದೆ ಎಂದು ಹೇಳಿದರು.
ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗೋಕುಲ ಮಹಿಂದ್ರಕರ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಭಿವೃದ್ಧಿ ಕಾಳಜಿಯಿಂದ ನಿರೀಕ್ಷೆ ಮೀರಿ ನಗರ ಅಭಿವೃದ್ಧಿಗೊಂಡಿದೆ. ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಆಗುವುದನ್ನು ಸರಿಪಡಿಸಬೇಕು. ಬೀದಿ ಬದಿ ವ್ಯಾಪಾರಿಗಳಿಂದ ಅಂಗಡಿಕಾರರಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.ಮಹಾನಗರ ಪಾಲಿಕೆ ಸದಸ್ಯರು, ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ವ್ಯಾಪಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.