ಪರದೆಯ ಹಿಂದೆ ಸರಿದ ರಂಗನಾಯಕಿ ಡಿ.ಹನುಮಕ್ಕ

KannadaprabhaNewsNetwork |  
Published : Oct 04, 2025, 01:00 AM IST
ಫೋಟೋವಿವರ- (3ಎಂಎಂಎಟಚ್‌1,2,3,4,5 ಡಿ. ಹನುಮಕ್ಕ ವಿವಿಧ ನಾಟಕಗಳಲ್ಲಿ ಅಭಿಯಿಸಿದ ಚಿತ್ರಗಳು) | Kannada Prabha

ಸಾರಾಂಶ

ಚಲನಚಿತ್ರ ಕಲಾವಿದೆ ಡಿ.ಹನುಮಕ್ಕ (58) ಶುಕ್ರವಾರ ಬೆಳಿಗ್ಗೆ ರಂಗನೈಪಥ್ಯೆಯಾಗಿದ್ದಾರೆ.

ಸಿ.ಕೆ. ನಾಗರಾಜ

ಮರಿಯಮ್ಮನಹಳ್ಳಿ: ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯೆ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ರಂಗಭೂಮಿ, ಚಲನಚಿತ್ರ ಕಲಾವಿದೆ ಡಿ.ಹನುಮಕ್ಕ (58) ಶುಕ್ರವಾರ ಬೆಳಿಗ್ಗೆ ರಂಗನೈಪಥ್ಯೆ (ನಿಧನ) ಯಾಗಿದ್ದಾರೆ.ಮರಿಯಮ್ಮನಹಳ್ಳಿಯ ವೃತ್ತಿ ರಂಗಭೂಮಿ ಕಲಾವಿದ ಡಿ.ದುರ್ಗಾದಾಸ್‌ ಮತ್ತು ಡಿ.ಪಾರ್ವತಮ್ಮ ಅವರ ನಾಲ್ಕು ಮಕ್ಕಳಲ್ಲಿ ಕೊನೆಯ ಪುತ್ರಿಯಾಗಿ 1967ರ ನವೆಂಬರ್‌ 17ರಂದು ಡಿ.ಹನುಮಕ್ಕ ಜನಿಸಿದ್ದು, ಇವರ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಸಂಬಂಧಿಗಳು ಎಲ್ಲರೂ ರಂಗಭೂಮಿಯ ನಂಟು ಹೊಂದಿದವರು. ಹನುಮಕ್ಕಗೂ ರಂಗಭೂಮಿ ರಕ್ತದಲ್ಲೇ ಇತ್ತು.ತಂದೆಯಂತೆ ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಹಂಬಲದಿಂದ 9ನೇ ತಗತಿವರೆಗೆ ಓದುವಾಗಲೇ ಹೆಗ್ಗೋಡಿನ ನೀನಾಸಂಗೆ (1994) ಸೇರಿದರು. ಅಲ್ಲಿ ನಾಟಕ ಕಲೆಯ ಎಲ್ಲ ಆಯಾಮಗಳನ್ನು ಕಲಿತರು.

ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ, ಚಿದಂಬರ ರಾವ್‌ ಜಂಬೆ, ಸಿಜಿಕೆ, ಸಿ.ಬಸವಲಿಂಗಯ್ಯ, ಬಿ.ವಿ. ಕಾರಂತ, ಕಿ.ರಂ. ನಾಗರಾಜ, ಕೀರ್ತಿನಾಥ ಕುರ್ತಕೋಟಿ, ಯು.ಆರ್‌. ಅನಂತಮೂರ್ತಿ, ಮೇಕಪ್‌ ನಾಣಿ, ಹುಲುಗಪ್ಪ ಕಟ್ಟಿಮನಿ, ಅಲೆಮನೆ ಸುಂದರಮೂರ್ತಿ, ಮಾಲತೇಶ ಬಡಿಗೇರ್‌, ವೆಂಕಟರಮಣ ಐತಾಳ, ಸುರೇಶ್ ಆನಗಳ್ಳಿ, ಕೃಷ್ಣಕುಮಾರ್ ಯಾದವ್‌, ಪ್ರಮೋದ್‌ ಶಿಗ್ಗಾಂವ್, ಇಕ್ಬಾಲ್‌ ಅಹಮ್ಮದ್‌ ಸೇರಿದಂತೆ ಅನೇಕ ರಂಗಭೂಮಿಯ ದಿಗ್ಗಜರೊಡನೆ ಒಡನಾಟ ಹಾಗೂ ಘಟಾನುಘಟಿ ನಿರ್ದೇಶಕರು ನಿರ್ದೇಶಿಸಿರುವ ನಾಟಕಗಳಲ್ಲೂ ಉತ್ತಮ ಕಲಾವಿದೆಯಾಗಿ ಮಿಂಚಿದರು.

ನೀನಾಸಂ, ಶಿವಸಂಚಾರ ತಂಡಗಳ ತಿರುಗಾಟದಿಂದಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು, ಪಂಚರಾತ್ರ, ತುಘಲಕ್‌, ವೆನಿಸಿನ ವರ್ತಕ, ಅಗ್ನಿ ಮತ್ತು ಮಳೆ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಕಲಾವಿದೆಯಾಗಿ ನಾಡಿನಾದ್ಯಂತ ಹೆಸರು ಸಂಪಾದಿಸಿದರು.

ನಾಟಕಗಳಿಂದ ಕೀರ್ತಿ:

ಬೆರಳ್‌ಗೆ ಕೊರಳ್‌ ನಾಟಕದಲ್ಲಿ ದ್ರೋಣಾಚಾರ್ಯ, ಷರೀಫದಲ್ಲಿ ಗೋವಿಂದಭಟ್ಟ, ಒಡಲಾಳದಲ್ಲಿ ಸಾಕವ್ವ, ನಾಗಮಂಡಲದಲ್ಲಿ ಕುರುಡವ್ವ, ಸ್ಮಶಾನ ಕುರುಕ್ಷೇತ್ರದಲ್ಲಿ ಅಜ್ಜಿ ಪಾತ್ರ ಸೇರಿದಂತೆ ಅನೇಕ ನಾಟಕಗಳಲ್ಲಿ ಸೈ ಎನ್ನಿಸಿಕೊಳ್ಳುವಂತೆ ಅಭಿನಯಿಸುತ್ತಿದ್ದರು. ರಂಗ ನಿರಂತರ, ಶಿವರಂಗ ಸೇರಿದಂತೆ ಅನೇಕ ಹವ್ಯಾಸಿ ರಂಗ ತಂಡಗಳಲ್ಲೂ ಸೇವೆ ಸಲ್ಲಿಸಿದರು.

ಮುಡಿಗೇರಿದ ಪ್ರಶಸ್ತಿ:

2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮುಂಬೈ ಕನ್ನಡ ಕಲಾ ಸಂಘ ಸ್ಪರ್ಧೆಯಲ್ಲಿ ಮತ್ತು ರಾಜ್ಯ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಕನ್ನಡ ಕಲಾ ಸಂಘದ ಟಿ.ಪಿ. ಕೈಲಾಸಂ ಪ್ರಶಸ್ತಿ, ಕೊಟ್ಟೂರು, ಕೂಡ್ಲಿಗಿಯಲ್ಲಿ ರಂಗ ಗೌರವ, ಇವರ ತಂದೆ ದುರ್ಗಾದಾಸಗೆ 1980ರಲ್ಲಿ ಹಾಗೂ 2017ರಲ್ಲಿ ಹನುಮಕ್ಕಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸುವ ಮೂಲಕ ತಂದೆ-ಮಗಳಿಬ್ಬರೂ ನಾಟಕ ಅಕಾಡಮಿ ಪ್ರಶಸ್ತಿ ಪಡೆದ ಅಪರೂಪದ ರಂಗ ಕುಟುಂಬವಾಗಿದೆ.

ಚಲನಚಿತ್ರದಲ್ಲಿ ಪಾತ್ರ:

ರಿಷಬ್ ಶೆಟ್ಟಿ ಪ್ರೊಡಕ್ಷನ್ ನ ರೂಪಾಂತರ, ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಶಿವರಾಜಕುಮಾರ ಅಭಿನಯದ ಭಜರಂಗಿ-​2 ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಕುಬುಸ ಇವರ ಕೊನೆಯ ಚಿತ್ರವಾಗಿತ್ತು.

‘ಹನುಮಕ್ಕ ಕನ್ನಡ ರಂಗಭೂಮಿಯ ಜೂನಿಯರ್ ಬಿ.ಜಯಶ್ರೀ ಎಂದೇ ಖ್ಯಾತರು. ಅನಾರೋಗ್ಯದ ಮುಂಚೆ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬಂದಿತ್ತು. ಆ ವೇಳೆಗೆ ಅವರು ಬ್ರೈನ್ ಸ್ಟ್ರೋಕ್ ಗೆ ತುತ್ತಾದರು. ತಾವೇ ಅಭಿನಯಿಸಿದ ಕುಬುಸ ಚಿತ್ರವನ್ನು ನೋಡಲೇ ಇಲ್ಲ.

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಸೃಷ್ಟಿಸಿದ ಸುಫ್ರಂಸೋ, ಕಾಂತಾರ 1 ಚಿತ್ರಕ್ಕೂ ಇವರು ಬುಕ್ ಆಗಿದ್ದರು. ತಮ್ಮ ಕೊನೆಯ ಚಿತ್ರ ಕುಬುಸ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ