ಗದಗ: ಸಕಾಲ ಯೋಜನೆಯಡಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿಯಲ್ಲಿ ವಿನಾ ಕಾರಣ ವಿಳಂಬವಾಗಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಸಕಾಲದಲ್ಲಿ ಅರ್ಜಿ ಸ್ವೀಕರಿಸುವಾಗ ಅರ್ಜಿಯ ಜತೆಗೆ ನಿಗದಿಪಡಿಸಿದ ದಾಖಲಾತಿಗಳ ಸಮೇತ ಸ್ವೀಕರಿಸಬೇಕು. ಸಕಾಲ ಯೋಜನೆಯಡಿ ಇಲಾಖೆಗಳಿಗೆ ನಿಗದಿಪಡಿಸಿದ ಯೋಜನೆಗಳಲ್ಲಿ ಕಡ್ಡಾಯವಾಗಿ ಅರ್ಜಿ ಸ್ವೀಕರಿಸಬೇಕು. ಕೆಲವು ತಾಂತ್ರಿಕ ತೊಂದರೆ ಉಂಟಾದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೊಳಿಸಲಾಗಿದ್ದು, ಈ ಕುರಿತು ಹೆಚ್ಚು ನಿಗಾ ವಹಿಸುವ ಮೂಲಕ ಯೋಜನೆ ಯಶಸ್ವಿಗೊಳಿಸಬೇಕೆಂದರು.
ಸಕಾಲ ಯೋಜನೆಯ ಜಿಲ್ಲಾ ಮಟ್ಟದ ಸಭೆಗೆ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು. ಆರೋಗ್ಯ, ಕೃಷಿ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯವರು ಸಕಾಲ ಯೋಜನೆಯ ಅರ್ಜಿಗಳ ಕುರಿತು ಹೆಚ್ಚಿನ ಶ್ರಮ ವಹಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸಕಾಲದಲ್ಲಿ ಸ್ವೀಕರಿಸಿದ ಅರ್ಜಿ ನಿಗದಿಪಡಿಸಿದ ವೇಳೆಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾತ್ತಾರೆ ಹಾಗೂ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದರು.ಜಿಪಂ ಸಿಇಓ ಭರತ್.ಎಸ್ ಮಾತನಾಡಿ, ಇಲಾಖೆಯ ಅಧಿಕಾರಿಗಳು ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.