72ನೇ ಸಹಕಾರಿ ಸಪ್ತಾಹ । ಸದಸ್ಯರು, ಖರೀದಿದಾರರಿಗೆ, ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ
ಸಹಕಾರಿ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳ ಹಸ್ತಕ್ಷೇಪ ಹಾಗೂ ರಾಜಕೀಯ ಲೇಪನ ಇರಬಾರದು. ರಾಜಕೀಯ ಪ್ರವೇಶಿಸಿದರೆ ಅನಾಹುತ ಉಂಟಾಗಿ ರೈತರು ಸಂಕಷ್ಟಪಡಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸೋಮವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದಿಂದ 72ನೇ ಸಹಕಾರಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಸಂಘದ ಸದಸ್ಯರಿಗೆ, ಖರೀದಿದಾರರಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಾಷ್ಟೀಕೃತ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಸೌಲಭ್ಯ ದೊರೆಯುವುದಿಲ್ಲ. ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ಒದಗಿಸಿ ರೈತರ ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಬಲಾಢ್ಯಗೊಳಿಸಲು ಶ್ರಮಿಸುತ್ತಿವೆ. ಸಹಕಾರಿ ಸಂಘಗಳು ಮೊಟ್ಟ ಮೊದಲು ಗದಗ ಜಿಲ್ಲೆಯಲ್ಲಿ ಪ್ರಾರಂಭಗೊಂಡು ಈಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತಾರಗೊಂಡಿವೆ. ಅದರಲ್ಲಿ ಪ್ರಮುಖವಾಗಿ ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಸದೃಢವಾಗಿ ಬೆಳೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಮಾತನಾಡಿ, ಇಂದಿನ ಯುವಕರಲ್ಲಿ ಸಹಕಾರಿ ತತ್ವ, ಧ್ಯೇಯ ಮತ್ತು ಅವಕಶ್ಯತೆ ಕುರಿತು ಪ್ರಾಥಮಿಕ ತಿಳುವಳಿಕೆ ಕಡಿಮೆ ಇದೆ. ಸಹಕಾರಿ ವಲಯದಲ್ಲಿ ಕೋಟ್ಯಂತರ ಸದಸ್ಯರಿದ್ದರೂ ತಿಳುವಳಿಕೆ ಇಲ್ಲದಿರುವುದು ಬೇಸರ ಸಂಗತಿ. ಪಠ್ಯ-ಪುಸ್ತಕದಲ್ಲಿ ಸಹಕಾರಿ ಸಂಘಗಳ, ಹುಟ್ಟು, ಸಂಘಟನೆ, ಪ್ರಯೋಜನ, ಆಡಳಿತ, ಕಾಯ್ದೆ ಕುರಿತು ಮಾಹಿತಿ ನೀಡುವುದು ಅವಕ ಎಂದರು.
ವಿವಿಧ ಕ್ಷೇತ್ರದ ಸಾಧಕರಾದ ಮಾರಿಕಾಂಬಾ ಲೈಫ್ ಗಾರ್ಡ್‌ನ ಮುಳುಗು ತಜ್ಞ ಗೋಪಾಲ ಗೌಡ, ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪುರಸ್ಕೃತ ಪ್ರಸಾದ ಹೆಗಡೆ ಹುಳಗೋಳ, ಭಾರತೀಯ ಸೇನೆಯ ವೈದ್ಯಕೀಯ ಸೇವೆಯಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾದ ಡಾ. ರಶ್ಮಿ ಹೆಗಡೆ ಇಸಳೂರು-ಬಪ್ಪನಳ್ಳಿ ಹಾಗೂ ವಿಶ್ವಶಾಂತಿ ಸರಣಿ ಯಕ್ಷನೃತ್ಯಕ್ಕಾಗಿ ಗ್ಲೊಬಲ್ ಚೈಲ್ಡ್ ಪೊಡಿಜಿ ಪ್ರಶಸ್ತಿ ಪುರಸ್ಕೃತೆ ತುಳಸಿ ಹೆಗಡೆ ಬೆಟ್ಟಕೊಪ್ಪ ಇವರನ್ನು ಸನ್ಮಾನಿಸಲಾಯಿತು.
ಸಂಘದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ವ್ಯವಹಾರ ನಡೆಸಿದ ಸದಸ್ಯರಾದ ರಾಮಕೃಷ್ಣ ಹೆಗಡೆ ತಟ್ಟೀಸರ, ರಾಮಚಂದ್ರ ಹೆಗಡೆ ಮುಳಕಿನಕೊಪ್ಪ, ಗಂಗಾಧರ ನಾಯ್ಕ ಹಳ್ಳಿಕಾನು, ನಾರಾಯಣ ಭಟ್ಟ ಬಿಸ್ಲಕೊಪ್ಪ, ಮಧುಕೇಶ್ವರ ಹೆಗಡೆ ಮುಂಡಿಗೆಮನೆ, ತಿಮ್ಮಯ್ಯ ಹೆಗಡೆ ಗೌಡನಗದ್ದೆ, ಗಣಪತಿ ಹೆಗಡೆ ಹೊಳೇಬೈಲ್, ಗಣಪತಿ ಹೆಗಡೆ ಹುಲೇಮಳಗಿ, ಮಹಾಬಲೇಶ್ವರ ಹೆಗಡೆ ಮತ್ತಿಘಟ್ಟ, ಬಂಗಾರೇಶ್ವರ ಹೆಗಡೆ ತಟ್ಗುಣಿ, ರಘುಪತಿ ಹೆಗಡೆ ತುಂಬೆಮನೆ, ಸತ್ಯನಾರಾಯಣ ಹೆಗಡೆ ಹುಲಿದೇವನಸರ, ವಿಘ್ನೇಶ್ವರ ಹೆಗಡೆ ನೆರ್ಲದ್ದ, ಸತ್ಯನಾರಾಯ ಹೆಗಡೆ ಸಂಪಗಾರ, ಮಂಜುನಾಥ ಹೆಗಡೆ ಅಳ್ಳಿಹದ್ದ, ಶ್ರೀಕಾಂತ ಹೆಗಡೆ ಅರಸಿಕೇರೆ, ರಾಜಶೇಖರ ಗೌಡ ಕಂತ್ರಾಜಿ, ಧನಂಜಯ ಹೆಗಡೆ ಕಾಗೇರಿ, ಗಣಪತಿ ಹೆಗಡೆ ಹಸಲಮನೆ, ಖರೀದಿದಾರರಾದ ಯಲ್ಲಾಪುರದ ಮೇ. ಅರೆಕಾಟನ್ ಪ್ಲಾಂಟರ್ಸ್ ಪ್ರೊಸೆಸ್ಸಿಂಗ್ ಕಂಪೆನಿಯ ನರಸಿಂಹಮೂರ್ತಿ ಭಟ್ಟ ಕೋಣೇಮನೆ, ಮೇ ತಮೀಮ್ ಟ್ರೆಡರ್ಸ್ ನ ಮುಸ್ತಾಕ ಅಹಮ್ಮದ್ ಅಬ್ದುಲ್ ಸಮದ್ ಅವರನ್ನು ಗೌರವಿಸಲಾಯಿತು.