ಮುಂಡರಗಿ: ಪುರಸಭೆ ಎಸ್.ಎಫ್.ಸಿ. ಅನುದಾನ ಹಾಗೂ 15ನೇ ಹಣಕಾಸು ಯೋಜನೆ ಅನುದಾನಗಳ ಕುರಿತು ತುರ್ತಾಗಿ ಸರ್ಕಾರಕ್ಕೆ ಮಾಹಿತಿ ಕಳಿಸಬೇಕಾಗಿರುವುದರಿಂದ ಇಂದಿನ ಸಾಮಾನ್ಯ ಸಭೆಯನ್ನು ನಡೆಸಲಾಗುತ್ತಿದೆ. ಇದಕ್ಕೆ ಅನ್ಯತಾ ಭಾವಿಸುವ ಅವಶ್ಯವಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಸ್ಪಷ್ಟಪಡಿಸಿದರು.
ಅಲ್ಲದೇ ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳು ಸೂಕ್ತವಾಗಿದ್ದು, ಸರ್ಕಾರ ಅವುಗಳನ್ನು ತಕ್ಷಣವೇ ಜಾರಿಗೊಳಿಸುವಂತೆ ಇಂದಿನ ಸಭೆಯಲ್ಲಿ ಪುರಸಭೆಯ ಎಲ್ಲ 23 ಜನ ಜನಪ್ರತಿನಿಧಿಗಳೂ ಸಹ ಠರಾವು ಪಾಸುಮಾಡಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದರು.
ಸಭೆಯಲ್ಲಿ 2024ನೇ ಡಿಸೆಂಬರ್ ಹಾಗೂ 2025ನೇ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳ ಜಮಾ ಮತ್ತು ಖರ್ಚುಗಳು ಅನುಮೋದನೆ ನೀಡುವ ಕುರಿತು ಚರ್ಚಿಸುತ್ತಿರುವ ಸಂದರ್ಭದಲ್ಲಿ ಸದಸ್ಯ ಪ್ರಹ್ಲಾದ ಹೊಸಮನಿ ನಮಗೆ ಇದರ ಸಂಪೂರ್ಣ ಜಮಾ ಖರ್ಚುಗಳ ಲೆಕ್ಕಬೇಕು. ಆಗದೆ ಇದ್ದಲ್ಲಿ ಈ ವಿಷಯವನ್ನು ಮುಂದಿನ ಸಭೆಗೆ ಇಟ್ಟುಕೊಳ್ಳಿ ಎಂದರು.ಇದಕ್ಕೆ ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಈಗಾಗಲೇ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಒಂದು ವಾರದ ಮೊದಲೇ ಎಲ್ಲ ಸದಸ್ಯರು ಅಜೆಂಡಾ ಹಾಗೂ ಜಮಾ ಖರ್ಚುಗಳ ಮಾಹಿತಿ ನೀಡಲಾಗಿದ್ದು, ತಾವು ಅದನ್ನು ನೋಡಿಕೊಂಡು ಬರಬೇಕಿತ್ತು. ಒಂದು ವೇಳೆ ನೋಡದೇ ಇದ್ದಲ್ಲಿ ಅರ್ಧ ಗಂಟೆ ಸಮಯ ತೆಗೆದುಕೊಂಡು ನೋಡಿಕೊಳ್ಳಿ. ಆದರೆ ಈ ವಿಷಯವನ್ನು ಮುಂದಿನ ಸಭೆಗೆ ಇಟ್ಟುಕೊಳ್ಳಲು ಆಗುವುದಿಲ್ಲ ಎಂದರು.
ಸದಸ್ಯ ಜ್ಯೋತಿ ಹಾನಗಲ್ ಮಾತನಾಡಿ, ಯಾವ ವಾರ್ಡಿಗೆ ಎಷ್ಟು ಅನುದಾನ ಹಾಕಿದ್ದೀರಿ ಎಂದು ಅನೇಕ ಬಾರಿ ಮಾಹಿತಿ ಕೇಳಿದರೂ ನೀವು ಕೊಡುತ್ತಿಲ್ಲ, ಈಗಲಾದರೂ ಪರಿಶೀಲನೆ ನಡೆಸಿ ಈ ಹಿಂದೆ ಹೆಚ್ಚಿನ ಅನುದಾನ ಹಾಕಿದ ವಾರ್ಡಿಗೆ ಕಡಿಮೆ ಮಾಡಿ ಉಳಿದ ವಾರ್ಡುಗಳಿಗೆ ಹೆಚ್ಚಿಗೆ ಮಾಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದಸ್ಯ ತಿಮ್ಮಪ್ಪ ದಂಡಿನ ತಮ್ಮ ವಾರ್ಡಿನಲ್ಲಿ ಇನ್ನೂ ಆಗಬೇಕಾದ ಅಭಿವೃದ್ಧಿ ಕೆಲಸಗಳಿದ್ದು, ರುದ್ರಭೂಮಿಗೆ ಅನುದಾನ ಹಾಕುವ ಕುರಿತು ವಿಷಯ ಕೇಳಿ ಬಂದಿದ್ದು, ರುದ್ರಭೂಮಿಗೆ ಹಾಕುವ ಬದಲು ವಾರ್ಡುಗಳಿಗೆ ಹಾಕುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫೀಕ್ ಮುಲ್ಲಾ ಹಾಗೂ ಸದಸ್ಯ ರಿಹಾನಾಬೇಗಂ ಕೆಲೂರ ಮಾತನಾಡಿ, ಎಲ್ಲ ಜನಾಂಗದವರ ರುದ್ರಭೂಮಿಗೆ ಅನುದಾನ ಹಾಕುವುದರ ಜತೆಗೆ ಮುಸ್ಲಿಂ ಸಮುದಾಯ ಹಾಗೂ ಇತರೆ ಕೆಲವು ಸಮುದಾಯಗಳ ರುದ್ರಭೂಮಿ ಬೇರೆ ಇದ್ದು, ಅವುಗಳ ಅಭಿವೃದ್ಧಿಗೂ ಹಣ ಮೀಸಲಿಡಬೇಕು ಎಂದಾಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅವುಗಳಿಗೂ ಹಣ ಮೀಸಲಿಟ್ಟಿರುವುದಾಗಿ ಹೇಳಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಮಾತನಾಡಿದರು. ಪ್ರಕಾಶ ಹಲವಾಗಲಿ, ಶಾಂತವ್ವ ಕರಡಿಕೊಳ್ಳ, ಪವನ್ ಮೇಟಿ, ವೀಣಾದೇವಿ ಸೋನಿ, ಸಂತೋಷ ಹಿರೇಮನಿ, ರೆಹೆಮಾನಸಾಬ್ ಮಲ್ಲನಕೇರಿ, ಶಿವು ಬಾರಕೇರ, ದೇವಕ್ಕ ದಂಡಿನ, ರಾಜಾಭಕ್ಷಿ ಬೆಟಗೇರಿ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.