ಕನ್ನಡಪ್ರಭ ವಾರ್ತೆ ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆ ಜೊತೆಗೆ ವಿವಿಧ ವೃತ್ತಿ ಕೌಶಲ್ಯ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿವಿ ಸಂಪನ್ಮೂಲ ವ್ಯಕ್ತಿ ಡಾ.ವೀಣಾ ಜಾಧವ ಹೇಳಿದರು.
ಧಾರವಾಡದ ಶ್ರೀ ಸಾಯಿ ಎಂಟರ್ಪ್ರೈಸಸ್ ಜ್ಯೋತಿ ಹಿರೇಮಠ ಮಾತನಾಡಿ, ಇಂದು ಮಹಿಳೆಯರಿಗೆ ಸ್ವಂತ ಉದ್ದಿಮೆಗಳನ್ನು ಆರಂಭಿಸಲು ಹಲವು ಅವಕಾಶಗಳಿವೆ. ಸರ್ಕಾರವು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲ್ಲಿ ವೃತ್ತಿ ಕೌಶಲ್ಯಗಳಿದ್ದರೆ, ಸ್ವಂತ ಉದ್ದಿಮೆಯನ್ನು ಆರಂಭಿಸಿ ಸ್ವಾವಲಂಬಿಯಾಗಿ ಬದುಕಬಹುದು. ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದೆಂದು ಮಾಹಿತಿ ನೀಡಿದರು.
ವಿಶ್ವವಿದ್ಯಾನಿಲಯದ ಪೇಪರ್ ಪುನರುತ್ಪಾದನಾ ಘಟಕ ಸಿಬ್ಬಂದಿ ರಮೇಶ ಹಿರೇಮಠ ವಿದ್ಯಾರ್ಥಿನಿಯರಿಗೆ ತ್ಯಾಜ್ಯ ಕಾಗದಗಳಿಂದ ಕಡತಗಳನ್ನು ತಯಾರಿಸುವ ಕೌಶಲ್ಯದ ಕುರಿತು ಮಾಹಿತಿ ನೀಡಿದರು. ಕಡತ ನಿರ್ಮಾಣ ಪ್ರಕ್ರಿಯೆಯನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರಿಗೆ ನಿರುಪಯುಕ್ತ ಕಾಗದಗಳನ್ನು ಬಳಸಿ ತಯಾರಿಸಿದ ಕೈಚೀಲ, ಫೈಲ್ ಹಾಗೂ ಇತರ ಕರಕುಶಲ ಮಾದರಿಗಳನ್ನು ಪ್ರದರ್ಶಿಸಲಾಯಿತು. ಕೈಚೀಲ ತಯಾರಿಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು.ಕುಲಸಚಿವ ಶಂಕರಗೌಡ ಸೋಮನಾಳ ಕಾರ್ಯಾಗಾರ ಉದ್ಘಾಟಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ ಅತಿಥಿಗಳಾಗಿ ಭಾಗವಹಿಸಿದ್ದರು. ಪೇಪರ್ ಪುನರುತ್ಪಾದನಾ ಘಟಕದ ಸಂಯೋಜಕ ಡಾ.ಅಕ್ಷಯ ಯಾರ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು.