ಮಾವಿನ ತೋಪಿನಲ್ಲಿ ಇತ್ತು ಡ್ರಗ್ಸ್‌ ಶೆಡ್‌

KannadaprabhaNewsNetwork |  
Published : Dec 29, 2025, 02:15 AM IST
ಡ್ರಗ್ಸ್‌ | Kannada Prabha

ಸಾರಾಂಶ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ನಡೆಸಿ ಡ್ರಗ್ಸ್‌ ಘಟಕ ಪತ್ತೆ ಹಚ್ಚಿ ಕೋಟ್ಯಂತರ ರು. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದು, ಸದ್ಯ ಎರಡು ಶೆಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ನಡೆಸಿ ಡ್ರಗ್ಸ್‌ ಘಟಕ ಪತ್ತೆ ಹಚ್ಚಿ ಕೋಟ್ಯಂತರ ರು. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದು, ಸದ್ಯ ಎರಡು ಶೆಡ್‌ಗಳನ್ನು ಜಪ್ತಿ ಮಾಡಲಾಗಿದೆ.

ನಗರದ ಕೊತ್ತನೂರು, ಬಾಗಲೂರು ಮತ್ತು ಅವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಗಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಬಿಹಾರ ಮೂಲದ ಇಬ್ಬರು ಆರೋಪಿಗಳು ಉಳಿದುಕೊಂಡಿದ್ದರು. ಆರೋಪಿಗಳು ಕಳೆದ ಮೂರು ತಿಂಗಳಿನಿಂದ ಬೇರೆ ಕಡೆ ಕಾರ್ಪೆಂಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇಬ್ಬರನ್ನೂ ಬಾಗಲೂರಿನಲ್ಲಿ ಮನೆಯೊಂದರಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಬಂಧಿತ ಆರೋಪಿಗಳ ಪೈಕಿ ಬೆಳಗಾವಿ ಮೂಲದ ಪ್ರಶಾಂತ್‌ ಯಲ್ಲಪ್ಪ ಪಾಟೀಲ್‌ ಕೆಮಿಕಲ್‌ ಎಂಜಿನಿಯರ್‌ ಆಗಿದ್ದ. ಈತ ನೀಡಿದ ಮಾಹಿತಿ ಆಧರಿಸಿ ರಾಜಸ್ಥಾನ ಮೂಲದ ಸೂರಜ್‌ ರಮೇಶ್‌ ಯಾದವ್‌, ಮಲ್ಖನ್‌ ರಾಮ್‌ಲಾಲ್‌ ಬಿಷ್ಣೋಯಿ ಎಂಬುವರನ್ನು ಬಂಧಿಸಲಾಗಿದೆ.

ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಫಾರ್ಮ್‌ ಹೌಸ್‌ (ಮಾವಿನತೋಪು)ನಲ್ಲಿ ಶೆಡ್‌ವೊಂದನ್ನು ನಿರ್ಮಾಣ ಮಾಡಿ ಅದರಲ್ಲಿ ಆರೋಪಿಗಳು ಡ್ರಗ್ಸ್‌ ತಯಾರಿಕೆ ಮಾಡುತ್ತಿದ್ದರು. ಇದು ನಿರ್ಜನ ಪ್ರದೇಶವಾಗಿದ್ದು, ಇಲ್ಲಿ ಪೊಲೀಸರ ಕಣ್ಣು ತಪ್ಪಿಸಿ ವ್ಯವಸ್ಥಿತವಾಗಿ ಮಾದಕವಸ್ತುಗಳನ್ನು ತಯಾರಿಸುತ್ತಿದ್ದರು. ಇವೆಂಜ್‌ ಮ್ಯಾನೇಜರ್‌ ಒಬ್ಬ ಫಾರ್ಮ್‌ ಹೌಸ್‌ನಲ್ಲಿ ಡ್ರಗ್ಸ್‌ ಪಾರ್ಟಿಗಳನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಅವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಯರಪ್ಪನಹಳ್ಳಿಯಲ್ಲಿ ಡ್ರಗ್ಸ್ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಲಾಗಿತ್ತು. ಈ ಎರಡೂ ಫ್ಯಾಕ್ಟರಿಗಳಲ್ಲ, ಬದಲಾಗಿ ಶೆಡ್‌ಗಳು. ಅವುಗಳನ್ನು ಸೀಜ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರ ಪೊಲೀಸರಿಗೆ ಬಾರದ ಡ್ರಗ್ಸ್‌ ಘಾಟು:

ನಗರದಲ್ಲಿ ದೊಡ್ಡ ಡ್ರಗ್ಸ್‌ ಜಾಲ ಇಷ್ಟೊಂದು ಸಕ್ರಿಯವಾಗಿದ್ದರೂ ನಗರದ ಪೊಲೀಸರು ಇದರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಡ್ರಗ್ಸ್‌ ಘಟಕ ಪತ್ತೆ ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ತಲೆನೋವು ತಂದಿದೆ. ಸಿಸಿಬಿಯಲ್ಲಿ ಮಾದಕ ವಸ್ತು ನಿಯಂತ್ರಣ ದಳ ಇದೆ. ಅವರ ಕೆಲಸ ಬರೀ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ ಡ್ರಗ್ಸ್‌ ಸೀಜ್ ಮಾಡುವುದು ಮಾತ್ರವೇ? ನಗರದಲ್ಲಿದ್ದ ಡ್ರಗ್ಸ್‌ ಘಟಕಗಳ ಬಗ್ಗೆ ಪೊಲೀಸರು ಮೈಮರೆತಿದ್ದಾರೆಯೇ ಎಂಬ ಮಾತುಗಳು ಕೇಳಿಬಂದಿದೆ.--

ಪಾಯಿಂಟ್ಸ್‌....

* ಬಾಗಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಇಬ್ಬರು ಆರೋಪಿಗಳ ಬಂಧನ

* ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ತಯಾರಿಸಲು ಶೆಡ್‌ ಮಾಡಿಕೊಂಡಿದ್ದರು

* ಅವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಡ್ರಗ್ಸ್‌ ಉತ್ಪಾದನೆ ಮಾಡುತ್ತಿದ್ದರು

* ಶುಕ್ರವಾರ ಮಹಾರಾಷ್ಟ್ರ ಮತ್ತು ಬೆಂಗಳೂರು ಪೊಲೀಸರಿಂದ ಜಂಟಿ ಕಾರ್ಯಾಚರಣೆ

* 58 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡಿದ್ದಾರೆ.

* ಜಪ್ತಿಯಾದ ಡ್ರಗ್ಸ್ ಮೌಲ್ಯ 1.20 ಕೋಟಿ ರು. ಅಷ್ಟೇ ಎಂದ ಗೃಹಸಚಿವರು

-ಕೋಟ್‌-

ಮಹಾರಾಷ್ಟ್ರ ಪೊಲೀಸರನ್ನು

ಕರೆದುಕೊಂಡು ಹೋಗಿದ್ದೆ

ಇದು ಮಹಾರಾಷ್ಟ್ರ ಪೊಲೀಸರು ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಾಗಿದ್ದು, ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ಇತ್ತು. ಆದರೆ ಆ ಸ್ಥಳಕ್ಕೆ ನಾನೇ ಅವರನ್ನು ಖುದ್ದು ಕರೆದುಕೊಂಡು ಹೋಗಿದ್ದೆ. ಜಂಟಿಯಾಗಿ ಪರಿಶೀಲನೆ ನಡೆಸಲಾಯಿತು. ನಂತರ ಸ್ಥಳಕ್ಕೆ ಸಿಸಿಬಿ, ವೈಟ್‌ಫೀಲ್ಡ್‌ ಪೊಲೀಸರನ್ನು ಕರೆಸಿಕೊಂಡು ತನಿಖೆ ಕೈಗೊಳ್ಳಲಾಯಿತು.

- ವಿ.ಜೆ ಸಜೀತ್‌, ಈಶಾನ್ಯ ವಿಭಾಗದ ಡಿಸಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ