ಈ ವರ್ಷ ಪಾಲಿಕೆಗೆ ಚುನಾವಣೆ ಇಲ್ಲ: ಕೋರ್ಟಿಗೆ ಸರ್ಕಾರ ಮಾಹಿತಿ

KannadaprabhaNewsNetwork |  
Published : Aug 12, 2025, 02:02 AM ISTUpdated : Aug 12, 2025, 11:25 AM IST
BBMP latest news today photo

ಸಾರಾಂಶ

ಬೆಂಗಳೂರು ಮಹಾನಗರ ಆಡಳಿತದ ನಿರ್ವಹಣೆಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವನ್ನು ಈ ವರ್ಷ ಸ್ಥಾಪಿಸುವುದಿಲ್ಲ, ಹೊಸದಾಗಿ ರಚನೆ ಮಾಡಲಿರುವ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ  

 ಬೆಂಗಳೂರು : ಬೆಂಗಳೂರು ಮಹಾನಗರ ಆಡಳಿತದ ನಿರ್ವಹಣೆಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವನ್ನು ಈ ವರ್ಷ ಸ್ಥಾಪಿಸುವುದಿಲ್ಲ, ಹೊಸದಾಗಿ ರಚನೆ ಮಾಡಲಿರುವ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕಟ್ಟಡ ಬೈಲಾ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ (ಎಇಇ) ನೀಡಿರುವ ನೋಟಿಸ್‌ ರದ್ದುಪಡಿಸಲು ಕೋರಿ ಸಿ.ವಿ. ರಾಮನ್‌ ನಗರದ ಮುನಿವೆಂಕಟಪ್ಪ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ಪೀಠಕ್ಕೆ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಈ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸದ್ಯ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಕುರಿತಂತೆ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿರುವುದರಿಂದ ಇದರಿಂದ ಪಾಲಿಕೆಯ ಎಇಇಗೆ ನೋಟಿಸ್‌ ನೀಡುವ ಅಧಿಕಾರ ಇಲ್ಲ, ಹಾಗಾಗಿ ನೋಟಿಸ್‌ ರದ್ದುಪಡಿಸಬೇಕು ಎಂದು ಕೋರಿದರು.

ಈ ವಾದ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಆಗುವವರೆಗೆ ಬಿಬಿಎಂಪಿ ಕಾಯ್ದೆ- 2020 ಜಾರಿಯಲ್ಲಿರುತ್ತದೆ. ಈ ಕುರಿತಂತೆ ಸರ್ಕಾರವೇ 2025ರ ಮೇ 15ರಂದು ಆದೇಶ ಹೊರಡಿಸಿದೆ. ಅದರಂತೆ ಕಟ್ಟಡ ಬೈಲಾ ಉಲ್ಲಂಘನೆ ಸಂಬಂಧ ನೋಟಿಸ್‌ ನೀಡುವ ಅಧಿಕಾರ ಎಇಇ ಹೊಂದಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿರುವುದರಿಂದ ಬಿಬಿಎಂಪಿ ಕಾಯ್ದೆ ಜಾರಿಯಲ್ಲಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸುತ್ತಿದ್ಧಾರೆ. ಹಾಗಾಗಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ ಯಾವಾಗ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ ಮುಂದೂಡಲಾಗಿದೆ. ಅದನ್ನು ಈ ವರ್ಷ ಸ್ಥಾಪಿಸುವುದಿಲ್ಲ. ಬಿಬಿಎಂಪಿಯನ್ನು ವಿಭಜಿಸಿ ರಚಿಸಿರುವ ಐದು ಪಾಲಿಕೆಗಳಿಗೆ 2026ರ ಜನವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಲ್ಲಿವರೆಗೆ ಬಿಬಿಎಂಪಿ ಕಾಯ್ದೆ ಜಾರಿಯಲ್ಲಿದೆ. ನಗರದ ಆಡಳಿತವನ್ನು ಬಿಬಿಎಂಪಿ ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಿದರು.

ನಂತರ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ