ಅಜೀಜಅಹ್ಮದ ಬಳಗಾನೂರ
ಭಕ್ತಿಯಿಂದ ಪೂಜಿಸಿ, ಅದ್ಧೂರಿ ಮೆರವಣಿಗೆಯಲ್ಲಿ ಬೀಳ್ಕೊಟ್ಟ ಗಣೇಶಮೂರ್ತಿಗಳು ಹೊಸೂರು ಬಾವಿಯಲ್ಲಿ ಅನಾಥವಾಗಿ ಬಿದ್ದಿವೆ. ಮುರಿದ ಕೈಕಾಲು, ಬೇರ್ಪಟ್ಟ ಸೊಂಡಿಲು, ಕಿರೀಟ, ಕೊಳೆತ ಹೂವು, ಬಟ್ಟೆ ಹಾಗೂ ಕಟ್ಟಿಗೆಯ ಅವಶೇಷಗಳು ನೀರಿನಲ್ಲೇ ಉಳಿದು ದುರ್ನಾತ ಬೀರುತ್ತಿವೆ.
ಗಣೇಶಮೂರ್ತಿಗಳ ವಿಸರ್ಜನೆ ಮುಗಿದು ತಿಂಗಳಾದರೂ ಇವುಗಳನ್ನು ತೆರವುಗೊಳಿಸುವ ಗೋಜಿಗೆ ಮಹಾನಗರ ಪಾಲಿಕೆ ಹೋಗಿಲ್ಲ. ಪರಿಣಾಮ, ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಜತೆಗೆ ಸುತ್ತಮುತ್ತಲಿನ ನಿವಾಸಿಗಳು ಕೊಳಕು ವಾಸನೆಯ ನಡುವೆ ಬದುಕುವಂತಾಗಿದೆ.ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆದರೆ, ಉತ್ಸವದ ಸಂಭ್ರಮ ಮುಗಿದ ಬಳಿಕ ಮೂರ್ತಿಗಳ ಅವಶೇಷಗಳನ್ನು ಗೌರವಯುತವಾಗಿ ತೆರವುಗೊಳಿಸಿ, ವಿಸರ್ಜನಾ ಸ್ಥಳವನ್ನು ಸ್ವಚ್ಛವಾಗಿಡುವ ಮೂಲಭೂತ ಹೊಣೆಗಾರಿಕೆಯೇ ನನೆಗುದಿಗೆ ಬಿದ್ದಿದೆ.
ಒಂದೂವರೆ ತಿಂಗಳ ಹಿಂದೆ ವಿಸರ್ಜಿಸಲಾದ 15ರಿಂದ 25 ಅಡಿ ಎತ್ತರದ ಬೃಹತ್ ಗಣೇಶಮೂರ್ತಿಗಳ ಅವಶೇಷಗಳು ಇನ್ನೂ ಬಾವಿಯಲ್ಲೇ ಇವೆ. ಅಲಂಕಾರಕ್ಕೆ ಬಳಸಿದ ಬಟ್ಟೆ, ಕಟ್ಟಿಗೆ, ಹೂವಿನ ಮಾಲೆ ಹಾಗೂ ಇತರ ತ್ಯಾಜ್ಯ ಕೊಳೆತು ವಾತಾವರಣ ಕಲುಷಿತಗೊಳಿಸಿವೆ. ಸುತ್ತಮುತ್ತಲಿನ ಮನೆ-ಅಂಗಡಿಗಳ ನಿವಾಸಿಗಳು ದುರ್ನಾತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂಬುದು ಸ್ಥಳೀಯರ ಆಕ್ರೋಶ.
ಹುಬ್ಬಳ್ಳಿಯಲ್ಲಿ 950ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. 5, 7, 9 ಹಾಗೂ 11 ದಿನಗಳ ಪೂಜೆಯ ಬಳಿಕ ಉಣಕಲ್ ಕೆರೆ ಪಕ್ಕದ ಕೃತಕ ಬಾವಿ, ಹೊಸೂರು ಬಾವಿ ಮತ್ತು ಇಂದಿರಾ ಗಾಜಿನ ಮನೆ ಸಮೀಪದ ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ.
ಸಂಘಟನೆಗಳೂ ಗಮನಿಸುತ್ತಿಲ್ಲ:
ಗಣೇಶೋತ್ಸವದ ವೇಳೆ ಲಕ್ಷಾಂತರ ಭಕ್ತರ ಭಾವನೆಗಳಿಗೆ ಸ್ಪಂದಿಸುವ ವ್ಯವಸ್ಥೆ, ಹಬ್ಬ ಮುಗಿದ ಬಳಿಕವೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಹೊಸೂರು ಬಾವಿಯಲ್ಲಿನ ಅವಶೇಷಗಳನ್ನು ತಕ್ಷಣ ತೆರವುಗೊಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ.
ಹೊಸೂರು ಬಾವಿಯಲ್ಲಿ ವಿಸರ್ಜಿಸಲಾದ ಗಣೇಶಮೂರ್ತಿಗಳ ಅವಶೇಷ ಸೇರಿದಂತೆ ತ್ಯಾಜ್ಯವನ್ನು ತೆರವುಗೊಳಿಸುವುದು ಪಾಲಿಕೆಯ ಜವಾಬ್ದಾರಿ. ಒಂದು ತಿಂಗಳು ಕಳೆದರೂ ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವುದು ತೀವ್ರ ನೋವುಂಟು ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಬಾವಿಯಲ್ಲಿರುವ ತ್ಯಾಜ್ಯವನ್ನು ಹೊರತೆಗೆಯಬೇಕು ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಗಣೇಶಮೂರ್ತಿಗಳನ್ನು ವಿಸರ್ಜಿಸಿ ತಿಂಗಳು ಕಳೆದರೂ ಅವಶೇಷಗಳನ್ನು ತೆರವುಗೊಳಿಸಿಲ್ಲ. ಅವು ಕೊಳೆತು ವಿಪರೀತ ದುರ್ನಾತ ಬೀರುತ್ತಿವೆ. ಬಾವಿಯ ಸುತ್ತಮುತ್ತ ಸಂಚರಿಸಲೂ ಕಷ್ಟವಾಗಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.