ಕೆ.ಆರ್‌. ನಗರ ತರಕಾರಿ ವ್ಯಾಪಾರಿಗೆ ನೆಲೆ, ಬೆಲೆ ಇಲ್ಲ

KannadaprabhaNewsNetwork |  
Published : Nov 28, 2025, 01:06 AM IST
58 | Kannada Prabha

ಸಾರಾಂಶ

ಆನಂತರ ಪುರಸಭೆಯವರು ಮಾರುಕಟ್ಟೆ ನಿರ್ಮಾಣದ ಕಾಮಗಾರಿ ಆರಂಭಿಸಿ ಎರಡು ತಿಂಗಳ ಹಿಂದೆಯೆ ಪೂರ್ಣಗೊಳಿಸಿದ್ದರು ಅದರ ಉದ್ಘಾಟನೆ ಮಾಡಿ ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡದಿರುವುದರಿಂದ ಈಗ ಎಲ್ಲೆಂದರಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು ಹೇಳುವವರು ಕೇಳುವವರೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದಲ್ಲಿ ತರಕಾರಿ ವ್ಯಾಪಾರ ಮಾಡುವವರಿಗೆ ನೆಲೆ ಮತ್ತು ಬೆಲೆ ಇಲ್ಲದಂತಾಗಿದ್ದು, ಕಳೆದ ಆರು ತಿಂಗಳಿನಿಂದ ಅವರುಗಳು ಬೀದಿ ಪಾಲಾಗಿದ್ದಾರೆ.

ಈ ಹಿಂದೆ ಬಜಾರ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಎಲ್‌.ಐಸಿ ಕಚೇರಿಯ ಮುಂದೆ ಕಳುಹಿಸಿ ಮೂರು ತಿಂಗಳ ನಂತರ ನೂತನ ಮಾರುಕಟ್ಟೆ ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಪುರಸಭೆಯ ಆಡಳಿತ ಮಂಡಳಿಯವರು ಭರವಸೆ ನೀಡಿದ್ದರು.

ಅವರ ಮಾತನ್ನು ನಂಬಿದ ವ್ಯಾಪಾರಿಗಳು ಪುರಸಭೆಯವರ ಸೂಚನೆ ಪಾಲಿಸಿ ಅವರು ನಿಗದಿ ಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದರಿಂದ ಬಜಾರ್ ರಸ್ತೆ ಸಂಚಾರಕ್ಕೆ ಅನುಕೂಲವಾಗುವುದರ ಜತೆಗೆ ನಾಗರೀಕರಿಗೂ ಸಂತಸವಾಗಿತ್ತು.

ಆನಂತರ ಪುರಸಭೆಯವರು ಮಾರುಕಟ್ಟೆ ನಿರ್ಮಾಣದ ಕಾಮಗಾರಿ ಆರಂಭಿಸಿ ಎರಡು ತಿಂಗಳ ಹಿಂದೆಯೆ ಪೂರ್ಣಗೊಳಿಸಿದ್ದರು ಅದರ ಉದ್ಘಾಟನೆ ಮಾಡಿ ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡದಿರುವುದರಿಂದ ಈಗ ಎಲ್ಲೆಂದರಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು ಹೇಳುವವರು ಕೇಳುವವರೆ ಇಲ್ಲದಂತಾಗಿದೆ.

ನ. 6 ರಂದು ಪುರಸಭೆಯ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದ ನಂತರ ಈಗ ವ್ಯಾಪಾರಿಗಳ ಸಮಸ್ಯೆ ಕೇಳದವರೆ ಇಲ್ಲವಾಗಿದ್ದು, ಇದರ ಜತೆಗೆ ಪುರಸಭೆಯ ಮುಖ್ಯಾಧಿಕಾರಿಗಳ ಹುದ್ದೆಯೂ ಖಾಲಿ ಇದ್ದು, ಪ್ರಭಾರವಾಗಿ ಕಾರ್ಯ ನಿರ್ವಹಿಸುವವರು ತರಕಾರಿ ವ್ಯಾಪಾರಿಗಳ ಕಡೆ ಗಮನ ಹರಿಸುತ್ತಿಲ್ಲ.

ಹತ್ತಾರು ಲಕ್ಷ ರು. ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತವಾದ ಮಾರುಕಟ್ಟೆ ಈಗ ಪಾಳು ಬಿದ್ದು ವ್ಯಾಪಾರಿಗಳ ಅನುಕೂಲಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಇದಕ್ಕೆ ಪರಿಹಾರ ಕಂಡು ಹಿಡಿಯುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ನಿಗದಿತವಾದ ಮಾರುಕಟ್ಟೆ ಇಲ್ಲದಿರುವುದರಿಂದ ವ್ಯಾಪಾರಿಗಳು ತಮಗಿಷ್ಟ ಬಂದ ಕಡೆ ಹೂವು, ಹಣ್ಣು ಮತ್ತು ತರಕಾರಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು ನಾಗರೀಕರು ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಶಾಸಕ ಡಿ. ರವಿಶಂಕರ್ ಅವರು ತರಕಾರಿ ಮಾರುಕಟ್ಟೆ ಆರಂಭಿಸಿ, ಬಿಸಿಲು ಮತ್ತು ಮಳೆಯಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡವರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಮತ್ತು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

--------------

ತರಕಾರಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಪಟ್ಟಣದಲ್ಲಿ ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದ್ದು ಅದನ್ನು ನಿಯಮಾನುಸಾರ ಮತ್ತು ಸರ್ಕಾರದ ನಿರ್ದೇಶನದಂತೆ ಶೀಘ್ರದಲ್ಲಿಯೇ ಉದ್ಘಾಟನೆ ಮಾಡಿ ಅರ್ಹ ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಲಾಗುತ್ತದೆ.

- ಡಿ. ರವಿಶಂಕರ್, ಶಾಸಕರು.

------

ಪಟ್ಟಣದಲ್ಲಿ ತರಕಾರಿವ ಮಾರುಕಟ್ಟೆ ನಿರ್ಮಾಣ ಮಾಡುವಾಗ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಈ ಹಿಂದೆ ಇದ್ದ ಪುರಸಭೆಯ ಚುನಾಯಿತ ಆಡಳಿತ ಮಂಡಳಿಯನ್ನು ನಿರ್ಲಕ್ಷ್ಯ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕಲ್ಲದೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಜನತೆಗೆ ಸತ್ಯ ತಿಳಿಸಬೇಕು.

- ಉಮೇಶ್, ಪುರಸಭೆ ಮಾಜಿ ಸದಸ್ಯರು.

----------

ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಪುರಸಭೆಯಿಂದ ಯಾವುದೇ ಅನುದಾನ ನೀಡಿಲ್ಲ ಹಾಗಾಗಿ ಶಾಸಕರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ಕಾಮಗಾರಿ ಮಾಡಿಸಿದ್ದು ಮಾರುಕಟ್ಟೆ ಉದ್ಘಾಟನೆಯಾಗದಿರುವ ಬಗ್ಗೆ ಗಮನಕ್ಕೆ ತಂದು ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ.

- ರಮೇಶ್, ಪ್ರಭಾರ ಮುಖ್ಯಾಧಿಕಾರಿ.

-------------

ಕಳೆದ ಕೆಲವು ವರ್ಷಗಳಿಂದ ಬಜಾರ್ ರಸ್ತೆಯಲ್ಲಿ ನೆಮ್ಮದಿಯಿಂದ ವ್ಯಾಪಾರ ಮಾಡುತ್ತಿದ್ದ ನಮ್ಮನ್ನು ಪುರಸಭೆಯವರು ಆರು ತಿಂಗಳ ಹಿಂದೆ ಎಲ್‌ಐಸಿ ಕಚೇರಿಯ ಮುಂದಕ್ಕೆ ಸ್ಥಳಾಂತರ ಮಾಡಿದ್ದು, ಇಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಇಲ್ಲದಿರುವುದರ ಜತೆಗೆ ವ್ಯಾಪಾರವು ಇಲ್ಲದೆ ನಾವು ಬೀದಿ ಪಾಲಾಗಿದ್ದೇವೆ.

- ಉಮಾ, ತರಕಾರಿ ವ್ಯಾಪಾರಿ.

----------

ಕಳೆದ ಆರು ತಿಂಗಳಿನಿಂದ ನಮಗೆ ಸರಿಯಾಗಿ ವ್ಯಾಪಾರವಾಗದಿರುವುದರ ಜತೆಗೆ ಸಂಜೆ ವೇಳೆ ಇಲ್ಲಿಗೆ ತರಕಾರಿ ಕೊಳ್ಳುವವರು ಬಾರದಿವುರುದರಿಂದ ಹಾಕಿದ ಬಂಡವಾಳ ವಾಪಸ್ ಬಾರದೆ ತೊಂದರೆ ಅನುಭವಿಸುತ್ತಿದ್ದು ನಮ್ಮ ಸಂಕಷ್ಠ ಕೇಳುವವರೆ ಇಲ್ಲವಾಗಿದೆ.

- ದೀಪು, ಬೀದಿ ಬದಿ ತರಕಾರಿ ವ್ಯಾಪಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ