ವೃದ್ಧನ ಕೈ ಕಾಲು ಕಟ್ಟಿ ಚಿನ್ನಾಭರಣ ದೋಚಿದ ಕಳ್ಳರು

KannadaprabhaNewsNetwork | Published : Sep 29, 2024 1:32 AM

ಸಾರಾಂಶ

ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸದೊಡ್ಡಿ ತೋಟದ ಮನೆಯಲ್ಲಿ ಕಳ್ಳತನ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು ವೃದ್ಧನ ಕೈ-ಕಾಲು ಕಟ್ಟಿ ಮನೆಯಲ್ಲಿ ಚಿನ್ನಾಭರಣ ನಗದನ್ನು ಹಾಡಹಗಲೇ ದೋಚಿರುವ ಘಟನೆ ಹನೂರು ತಾಲೂಕಿನ‌‌ ಹೊಸದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ಶನಿವಾರ ಘಟನೆ ಜರುಗಿದೆ.

ಜಗದೀಶ (70) ಎಂಬವರ ಮನೆಯಲ್ಲಿ ಕಳವಾಗಿದ್ದು ಇವರ ಪತ್ನಿ ರುಕ್ಮಿಣಿ ಹಾಲಿನ ಡೈರಿಗೆ ಹಾಲು ಹಾಕಲು ತೆರಳಿದ್ದಾಗ ಅಪರಿಚಿತರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಕುಡಿಯಲು ನೀರು ಕೇಳಿ ಅವರು ಮನೆಯ ಒಳಗೆ ಹೋಗುತ್ತಿದ್ದಂತೆ ಜಗದೀಶ್ ಅವರ ಕೈಕಾಲು, ಕಟ್ಟಿ ಬಟ್ಟೆ ಹಾಗೂ ಪ್ಲಾಸ್ಟಿಕ್ ನಿಂದ ಬಾಯಿಗೆ ತುರುಕಿ ಮನೆಯಲ್ಲಿದ್ದ 168 ಗ್ರಾಂ ಚಿನ್ನ ಹಾಗೂ 41,000 ರು. ಹಣ ಕಳವು ಮಾಡಿದ್ದಾರೆ.

ಕಳ್ಳರ ಕೈ ಚಳಕ:

ದೇವರ ಕೋಣೆಯಲ್ಲಿದ್ದ ಬೀರುವನ್ನು ತೆಗೆದು ಚಿನ್ನಾಭರಣ ಹಾಗೂ ನಗದನ್ನು, ದೋಚಿ ಪರಾರಿಯಾದರು. ಸ್ವಲ್ಪ ಸಮಯದ ನಂತರ ನನ್ನಅಣ್ಣ (ಧರ್ಮರೆಡ್ಡಿ) ನಾನು ನರಳುತ್ತಿದ್ದನ್ನು ನೋಡಿ ಬಾಯಿಯಲ್ಲಿದ್ದ ಪ್ಲಾಸ್ಟಿಕ್‌ನ್ನು ತೆಗೆದು ನಂತರ ಪಕ್ಕದ ತೋಟದ ಸುರೇಶ್‌ನನ್ನು ಕರೆದು ನನ್ನ ಕಾಲು ಕೈಗೆ ಕಟ್ಟಿದ್ದ ಪ್ಲಾಸ್ಟಿಕ್ ದಾರವನ್ನು ತೆಗೆದರು ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.ಬೆರಳಚ್ಚು ತಜ್ಞರ ಪರಿಶೀಲನೆ: ಸುದ್ದಿ ತಿಳಿಯುತಿದ್ದಂತೆ ಚಾಮರಾಜನಗರ ಜಿಲ್ಲಾ ಬೆರಳಚ್ಚು ತಜ್ಞ ಅಧಿಕಾರಿ ಸಿಬ್ಬಂದಿ ಭೇಟಿ ನೀಡಿ ಕಳ್ಳತನ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಿದರು. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಕವಿತಾ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್ ಸೂಚನೆಯ ಮೇರೆಗೆ ಹನೂರು ಇನ್ಸ್‌ಪೆಕ್ಟರ್ ಶಶಿಕುಮಾರ್, ರಾಮಾಪುರ ಪಿಎಸ್ಐ ಈಶ್ವರ್ ಹಾಗೂ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಸಿಬ್ಬಂದಿ ತೆರಳಿ ಘಟನೆಯ ಬಗ್ಗೆ ವಿಚಾರಣೆ ಮಾಡಿ ರಾಮಪುರ ಪೊಲೀಸ್ ಠಾಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this article