ಐದು ವರ್ಷವಾದರೂ ಲೋಕಾರ್ಪಣೆಯಾಗದ ತಿಮ್ಮಪ್ಪನ ರಾಜಗೋಪುರ

KannadaprabhaNewsNetwork |  
Published : Jun 28, 2024, 02:16 AM ISTUpdated : Jun 28, 2024, 12:01 PM IST
ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ರಥಕ್ಕೆ ಸೂರಿಲ್ಲ, ರಾಜಗೋಪುರಕ್ಕೆ ಕಳಸವಿಲ್ಲ ಜುಲೈ 18 ಕ್ಕೆ ಜಾತ್ರೆ | Kannada Prabha

ಸಾರಾಂಶ

ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ದೇವಾಲಯದ ರಾಜಗೋಪುರ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಸಹ ಲೋಕಾರ್ಪಣೆ ಮಾಡುವ ಮನಸ್ಸು ಮಾಡಿಲ್ಲ.

  ಅರಸೀಕೆರೆ:  ಇಲ್ಲಿನ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣವಾಗಿ 5 ವರ್ಷಗಳಾಗಿವೆ, ಆದರೆ ಇನ್ನೂ ಲೋಕಾರ್ಪಣೆಯಾಗಿಲ್ಲ. ಶ್ರೀ ಯವರ ರಥದ ಮನೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಕೆಡವಲಾಗಿದ್ದು, ಅನೇಕ ವರ್ಷಗಳಾದರೂ ಅದಕ್ಕೆ ಒಂದು ಸೂರನ್ನು ನಿರ್ಮಿಸಲಾಗಿಲ್ಲ.

ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ದೇವಾಲಯದ ಸಮಿತಿಯಲ್ಲದೇ ಅಭಿವೃದ್ಧಿ ಸಮಿತಿಯೂ ಎಂಬುದು ಇದ್ದು ಶಾಸಕರೇ ಅಧ್ಯಕ್ಷರಾಗಿದ್ದಾರೆ.ಈ ಸಮಿತಿಯಿಂದ ದೇವಾಲಯದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ, ಆದರೆ ದೇವಾಲಯದ ರಾಜಗೋಪುರ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಸಹ ಲೋಕಾರ್ಪಣೆ ಮಾಡುವ ಮನಸ್ಸು ಮಾಡಿಲ್ಲ.

ಕಳೆದ ವರ್ಷ ಶ್ರೀಯವರ ಮಹಾರಥೋತ್ಸವದ ವೇಳೆ ರಥದ ಕಳಸ ಕೆಳಗೆ ಬಿದ್ದಿತ್ತು, ಭಕ್ತರು ಇದು ರಾಜಗೋಪುರ ಲೋಕಾರ್ಪಣೆಗಾಗಿ ನೀಡಿರುವ ಸೂಚನೆ ಎಂದು ವ್ಯಾಖ್ಯಾನಿಸಿದ್ದರು. ಮುಂದಿನ ತಿಂಗಳು ಜುಲೈ 18 ರಂದು ಶ್ರೀಯವರ ಮಹಾರಥೋತ್ಸವ ಜರುಗಲಿದೆ. ರಾಜಗೋಪುರ ಲೋಕಾರ್ಪಣೆಯನ್ನು ಹೆಚ್ಚು ವಿಜೃಂಭಣೆಯಿಂದ ಮಾಡಬೇಕೆಂಬ ಆಶಯ ಶಾಸಕರದಾಗಿದ್ದು, ಇದುವರೆಗೂ ಅದು ಸಾಧ್ಯವಾಗಿಲ್ಲ. ದೇವಾಲಯ ಸಮಿತಿ ಮತ್ತು ಭಕ್ತರು ಸರಳವಾಗಿಯೇ ರಾಜಗೋಪುರ ಕುಂಭಾಭಿಷೇಕವನ್ನು ಮಾಡೋಣವೆಂಬ ದೇವಾಲಯ ಸಮಿತಿ ಮತ್ತು ಭಕ್ತರ ಅನಿಸಿಕೆಗೆ ಅವಕಾಶ ಕೊಡುತ್ತಿಲ್ಲ, ಹೀಗಾಗಿ ಇದು ನೆನೆಗುದಿಗೆ ಬಿದ್ದಿದೆ, ರಾಜಗೋಪುರ ನಿರ್ಮಾಣವಾಗಿ ಐದು ವರ್ಷಗಳು ಕಳೆದರೂ ಸಹ ಲೋಕಾರ್ಪಣೆಯಾಗದೇ ಇರುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಧಾರ್ಮಿಕ ತಜ್ಞರಿಂದಲೂ ಈಗ ಕೇಳಿಬರುತ್ತಿದೆ.

ಅಭಿವೃದ್ಧಿ ಹೆಸರಲ್ಲಿ ಸೂರು ಕಳೆದುಕೊಂಡ ರಥ:

ಶ್ರೀಯವರ ಬ್ರಹ್ಮರಥ ಶಿಥಿಲವಾಗಿತ್ತು. 1995ರಲ್ಲಿ ನೂತನ ರಥವನ್ನು ಲೋಕಾರ್ಪಣೆ ಮಾಡಲಾಗಿದೆ, ರಥದ ಸುರಕ್ಷತೆಗಾಗಿ ಪೂರ್ವಿಕರು ದೇವಾಲಯದ ಮುಂಭಾಗವೇ ರಥದ ಮನೆಯನ್ನ ನಿರ್ಮಿಸಿದ್ದರು. ದೇವಾಲಯ ಮುಂಭಾಗ ಅಭಿವೃದ್ಧಿ ಮಾಡುವ ಉದ್ದೇಶದಿಂದ ರಥದ ಮನೆಯನ್ನು ತೆರವುಗೊಳಿಸಲಾಯಿತು. ರಥವು ಬಿಸಿಲು- ಮಳೆಗೆ ಮೈಯೊಡ್ಡಿ ನಿಲ್ಲುವಂತಾಯಿತು.ಸುಂದರ ಕೆತ್ತನೆಯ ಮೂರ್ತಿಗಳನ್ನು ಹೊಂದಿರುವ ರಥಕ್ಕೆ ಇಂದು ಪ್ಲಾಸ್ಟಿಕ್ ಹಾಳೆಯೊಳಗೆ ಅಡಗಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ, ಆದರೂ ಶಾಸಕರಿಗೆ ತೇರಿಗೊಂದು ನೆರಳು ನಿರ್ಮಿಸಿಕೊಡಲಾಗಿಲ್ಲ ಎಂಬ ಕೊರಗು ಭಕ್ತರದ್ದಾಗಿದೆ.

5 ವರ್ಷಗಳಿದ್ದ ಉದ್ಘಾಟನೆ ಕಾಣದ ಯಾತ್ರಿ ನಿವಾಸ :

ಮಾಲೆಕಲ್ ತಿರುಪತಿ ಶ್ರೀ ಕ್ಷೇತ್ರಕ್ಕೆ ದೂರದಿಂದ ಯಾತ್ರಾರ್ಥಿಗಳು ಬಂದು ಉಳಿದುಕೊಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಾಂತರ ರು. ವೆಚ್ಚ ಮಾಡಿ 5 ವರ್ಷಗಳ ಹಿಂದೆಯೇ ನಿರ್ಮಿಸಿರುವ ಯಾತ್ರಿ ನಿವಾಸ್ ಇಂದಿಗೂ ಉದ್ಘಾಟನೆಯಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆಗೆ ಹೀಗೇಕೆ ವಿಳಂಬ ಎಂಬುದನ್ನು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ನಮ್ಮ ಶಾಸಕರೇ ಹೇಳಬೇಕು ಎನ್ನುತ್ತದೆ ತಿಮ್ಮಪ್ಪನ ಭಕ್ತ ಸಮೂಹ.

PREV

Recommended Stories

ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ
ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು