ಜಗತ್ತಿನ ಉದ್ಧಾರಕ್ಕೆ ಕನ್ನಡದ ಕೊಡುಗೆಯ ಚಿಂತನೆಯಾಗಲಿ

KannadaprabhaNewsNetwork | Updated : Nov 11 2023, 01:21 AM IST

ಸಾರಾಂಶ

. 500 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡಕ್ಕೆ 1500 ವರ್ಷಗಳ ಸಾಹಿತ್ತಿಕ ಇತಿಹಾಸವಿದೆ. ಅನೇಕ ಕವಿಗಳು ಕನ್ನಡ ನಾಡು ಮತ್ತು ಭಾಷೆಯ ಹಿರಿಮೆಯ ಬಗ್ಗೆ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡವನ್ನು ಉಳಿಸಿಕೊಳ್ಳಬೇಕಾದದ್ದು ಇಂದಿನ ಜನಾಂಗದ ಅಗತ್ಯವಾಗಿದೆ ಎಂದು ಎಂದು ಉಪನ್ಯಾಸಕ ರಂಗನಾಥ ಕಂಟನಕುಂಟೆ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಇನ್ಮುಂದೆ ಕನ್ನಡ ಮಾತು ತಲೆ ಎತ್ತುವ ಬಗೆ ಹೇಗೆ? ಜಗತ್ತಿನ ಉದ್ಧಾರಕ್ಕೆ ಕನ್ನಡದ ಕೊಡುಗೆ ಏನು ಎಂಬ ಚಿಂತನೆಯಾಗಬೇಕಾಗಿದೆ ಎಂದು ಉಪನ್ಯಾಸಕ ರಂಗನಾಥ ಕಂಟನಕುಂಟೆ ಹೇಳಿದರು.

ಒಂದೇ ಕರ್ನಾಟಕ ಒಂದೇ ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂದು ದ.ರಾ. ಬೇಂದ್ರೆಯವರು ಹಾಡಿದ್ದಾರೆ. 500 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡಕ್ಕೆ 1500 ವರ್ಷಗಳ ಸಾಹಿತ್ತಿಕ ಇತಿಹಾಸವಿದೆ. ಅನೇಕ ಕವಿಗಳು ಕನ್ನಡ ನಾಡು ಮತ್ತು ಭಾಷೆಯ ಹಿರಿಮೆಯ ಬಗ್ಗೆ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡವನ್ನು ಉಳಿಸಿಕೊಳ್ಳಬೇಕಾದದ್ದು ಇಂದಿನ ಜನಾಂಗದ ಅಗತ್ಯವಾಗಿದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ `ಕರ್ನಾಟಕ ಸಂಭ್ರಮ-50’ ನಿಮಿತ್ತ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ 9ನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬದಲಾಗುತ್ತಿರುವ ನಗರಗಳಲ್ಲಿ ಅಡುಗೆ ಮನೆ, ಮಕ್ಕಳ ಆಟ ಮತ್ತು ದಿನನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿ ಅನ್ಯ ಭಾಷೆಯ ಸವಾರಿ ನಡೆದಿದೆ ಎಂದ ಅವರು, ಜ್ಞಾನ, ವೈಚಾರಿಕತೆ, ನಿರ್ದಿಷ್ಟ ಗುರಿಯ ಹಿನ್ನೆಲೆಯಲ್ಲಿ ಕನ್ನಡವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಪ್ರಾಚೀನತೆ ಬಗ್ಗೆ ನಮಗೆ ಅಭಿಮಾನವಿರಬೇಕು. ಕನ್ನಡ ಉಳಿಸುವ ಕೆಲಸ ಕನ್ನಡಿಗರಾದ ನಾವೇ ಮಾಡಬೇಕು. ಕನ್ನಡ ಭವಿಷ್ಯದ ಕುರಿತು ಚಿಂತನ-ಮಂಥನವಾಗಬೇಕು. ಹೊರದೇಶಗಳಿಗೆ ಕನ್ನಡ ಜ್ಞಾನದ ಮೂಲಕ ಏನು ಕೊಟ್ಟಿದ್ದೇವೆ. ಜ್ಞಾನದಿಂದ ಕನ್ನಡದ ಗೌರವಕ್ಕೆ ಬೆಲೆಯುಂಟು. ಹಿಂದಿನ ಕಾಲಘಟ್ಟದ ಸಾಹಿತ್ಯವನ್ನು ಅಧ್ಯಯನ ಮಾಡಲು ನಾವು ಹಿಂದೇಟು ಹಾಕುತ್ತಿದ್ದೇವೆ. ಕನ್ನಡದ ಪರವಾಗಿ ಕೆಲಸ ಮಾಡುವ ಪ್ರವೃತ್ತಿ ಬೆಳೆಯದಿರುವುದು ಖೇದದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿ ಜೆ.ಎಸ್.ಎಸ್. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿನದತ್ತ ಹಡಗಲಿ ಕನ್ನಡ ನಾಡು-ನುಡಿಯ ಬಗ್ಗೆ ಮಾತನಾಡಿದರು. ಸುವರ್ಣ ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಸಾವಿತ್ರಿ ಬೆಣ್ಣಿ ಇದ್ದರು. ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಯುವಜನ ಹಾಗೂ ಸಾಂಸ್ಕೃತಿಕ ಕೇಂದ್ರ ಕಲಾವಿದರಾದ ಎಸ್.ಎಸ್. ಹಿರೇಮಠ, ಈಶ್ವರ ಅರಳಿ, ಶರೀಫ್ ದೊಡಮನಿ, ನಾಗರಾಜ ಗೌಡಣ್ಣವರ ನಾಡು-ನುಡಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕೆ.ಜಿ. ದೇವರಮನಿ, ಎಂ.ಎಂ. ಸುಬೇದಾರ, ಡಾ. ಆರ್.ವಿ. ಪಾಟೀಲ, ಡಾ. ವಿ.ಜಿ. ಪೂಜಾರ, ಪ್ರೊ. ಉಮೇಶಗೌಡ ಪಾಟೀಲ, ಡಾ. ಭೀಮಾಶಂಕರ, ಯಶೋಧಾ ಇದ್ದರು.

Share this article