ಏಕಕಾಲದಲ್ಲಿ ಸ್ಥಳೀಯ ಸಂಸ್ಥೆ ಎಲೆಕ್ಷನ್‌ ಬಗ್ಗೆ ಚಿಂತನೆ : ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Jan 20, 2026, 02:15 AM ISTUpdated : Jan 20, 2026, 05:56 AM IST
DK Shivakumar

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಚಿಂತನೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಚಿಂತನೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಬದ್ಧ

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಕುರಿತು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅಲ್ಲದೆ, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯಂತೆ ನಡೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಯುವಕರಿಗೆ ಅಧಿಕಾರ ನೀಡಬೇಕು, ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಗುರಿ. ಅದಕ್ಕಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆ ಜತೆಗೆ ತಾಪಂ, ಜಿಪಂ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೆ, ಎಲ್ಲ ಸ್ಥಳೀಯ ಚುನಾವಣೆಗಳನ್ನೂ ಒಂದೇ ಬಾರಿಗೆ ನಡೆಸಲು ಚಿಂತನೆ ಮಾಡಿದ್ದೇವೆ ಎಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿಯ 5 ನಗರ ಪಾಲಿಕೆಗಳಿಗೆ ಒಟ್ಟು 369 ವಾರ್ಡ್‌ಗಳನ್ನು ರಚಿಸಲಾಗಿದೆ. ಬೆಂಗಳೂರಿನ ಹೊರವಲಯವನ್ನು ನಗರ ಪಾಲಿಕೆಗಳ ವ್ಯಾಪ್ತಿಗೆ ಸೇರಿಸಿಕೊಳ್ಳುವ ಕುರಿತು ಚರ್ಚೆ ಮಾಡಲಾಗುತ್ತಿದೆ. ಅಲ್ಲದೆ, 5 ನಗರ ಪಾಲಿಕೆ, ತಾಪಂ ಮತ್ತು ಜಿಪಂಗಳಿಗೆ ಇರುವ ಮೀಸಲಾತಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಅವರು ಮತ್ತು ಸಚಿವರು ತಿಳಿಸಿದ್ದಾರೆ. ಅದರ ಜತೆಗೆ ಗ್ರಾಪಂ ಚುನಾವಣೆಗಳನ್ನೂ ಪಕ್ಷದ ಚಿಹ್ನೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ಆ ಕುರಿತು ಚರ್ಚೆ ಮಾಡುತ್ತಿದ್ದೇವೆ. ಅದರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದರು.

ಮತಪತ್ರ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ:

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಪತ್ರ ಬಳಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ರಾಜ್ಯ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಅದನ್ನು ತೀರ್ಮಾನಿಸುವ ಅಧಿಕಾರ ಆ ಸಂಸ್ಥೆಗಿದೆ. ಬಿಜೆಪಿ ಸರ್ಕಾರವಿದ್ದಾಗ 2020ರಲ್ಲಿ ತಂದ ಕಾನೂನಿನಲ್ಲಿ ಮತಪತ್ರ ಬಳಸಲು ಅವಕಾಶ ನೀಡಲಾಗಿದೆ. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಮತಪತ್ರ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಯಾವ ರೂಪದಲ್ಲಿ ಚುನಾವಣೆ ನಡೆಸಲಾಗುವುದು ಎಂಬುದಕ್ಕಿಂತ ಮತದಾನ ಪ್ರಮಾಣ ಹೆಚ್ಚಾಗುವುದು ಮುಖ್ಯ ಎಂದರು.

ಕೇಂದ್ರ ಚುನಾವಣಾ ಆಯೋಗದ ಮೇಲಿನ ಅನುಮಾನದಿಂದ ಮತಪತ್ರ ಬಳಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಚುನಾವಣೆ ಮಾಡಲು ನಾವು ಯಾರು? ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ. ರಾಜ್ಯ ಚುನಾವಣಾ ಆಯೋಗ ನಮ್ಮ ಸರ್ಕಾರದ ನಿಯಂತ್ರಣಕ್ಕೆ ಬರುವುದಿಲ್ಲ. ಏನು ಮಾಡಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. 

ಇದೀಗ ರಾಜ್ಯ ಚುನಾವಣಾ ಆಯೋಗ ಜಿಬಿಎ ನಗರ ಪಾಲಿಕೆ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನು, ಚುನಾವಣೆಗೆ ಸಂಬಂಧಿಸಿ ನಾವು ಈಗಾಗಲೇ ಬಿಎಲ್‌ಎಗಳ ನೇಮಕಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟು ಹೋಗಿದ್ದರೆ ಅವರಿಗೆ ಮತ್ತೆ ಅವಕಾಶ ಕಲ್ಪಿಸಬೇಕು ಹಾಗೂ ಅವರ ಹಕ್ಕು ಅವರಿಗೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇನ್ನು, ಅಧಿಕಾರಿಗಳ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?
ಇವಿಎಂ ಬೇಡ ಎನ್ನುತ್ತಿದ್ದ ಕಾಂಗ್ರೆಸ್ಸಿಗೆ ಗುಡ್‌ನ್ಯೂಸ್‌