ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ಆಸ್ಪತ್ರೆ ವಿಸ್ತರಣೆಗೆ ಜಾಗದ ಕೊರತೆ ಇದೆ. ತಮಿಳು ಕಾಲೋನಿ ತೆರವು ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಅದಕ್ಕಾಗಿ ಡಿಎಚ್‌ಒ ಕಚೇರಿ ಸ್ಥಳಾಂತರ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ಮಿಮ್ಸ್ ಆಸ್ಪತ್ರೆಯಲ್ಲಿ ನೂತನ ಎಕ್ಸ್-ರೇ ಮಿಷನ್‌ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಿಮ್ಸ್ ಆಸ್ಪತ್ರೆ ವಿಸ್ತರಣೆಗೆ ಸ್ಥಳದ ಕೊರತೆ ಇದೆ. ತಮಿಳು ಕಾಲೋನಿಯಲ್ಲಿರುವ ನಿವಾಸಿಗಳಿಗೆ ಕೆರೆಯಂಗಳದಲ್ಲಿ 550 ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಆ ಜಾಗ ದೊರಕಿದ್ದರೆ ಟ್ರಾಮಾ ಕೇರ್ ಸೆಂಟರ್ ಹಾಗೂ ಹೃದಯ ಸಂಬಂಧಿ ಆಸ್ಪತ್ರೆ ತೆರೆಯುವುದಕ್ಕೆ ಅನುಕೂಲವಾಗುತ್ತಿತ್ತು. ಅಲ್ಲದೇ, 40 ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಲು ಯೋಜನೆ ರೂಪಿಸಿಕೊಂಡಿದ್ದೇವು ಎಂದರು.
ಮಿಮ್ಸ್ ಆಸ್ಪತ್ರೆ ವಿಸ್ತರಣೆ ಮಾಡುವ ಅನಿವಾರ್ಯತೆ ಮನಗಂಡು ಡಿಎಚ್‌ಒ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಅಲ್ಲಿ ಎಷ್ಟು ಎಕರೆ ಜಾಗ ಸಿಗಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ಆಸ್ಪತ್ರೆ ವಿಸ್ತರಣೆ ಮಾಡುವುದಕ್ಕೆ ಯೋಜಿಸಲಾಗುತ್ತಿದೆ. ಮಿಮ್ಸ್ ಕಡೆಯಿಂದ ಡಿಎಚ್ಒ ಕಚೇರಿ ಬಳಿಗೆ ಬರುವುದಕ್ಕೆ ಹೆದ್ದಾರಿ ಬಳಿ ಕೆಳಸೇತುವೆ ನಿರ್ಮಿಸಲು ಚಿಂತನೆ ನಡೆದಿದೆ. ಇವೆಲ್ಲವೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಆಸ್ಪತ್ರೆ ವಿಸ್ತರಣೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ನಿಜ. ಮಿಮ್ಸ್ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ನನ್ನ ಗಮನಕ್ಕೆ ತಂದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಗಮನಸೆಳೆದು ಅಗತ್ಯವಿರುವಷ್ಟು ವೈದ್ಯರ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕೆನರಾ ಬ್ಯಾಂಕ್‌ನವರು 40 ಲಕ್ಷ ರು. ವೆಚ್ಚದಲ್ಲಿ ಎಕ್ಸ್-ರೇ ಮಿಷನ್‌ನನ್ನು ಕೊಡುಗೆಯಾಗಿ ಆಸ್ಪತ್ರೆಗೆ ನೀಡಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಯ ಜನರೂ ಚಿಕಿತ್ಸೆಗೆ ಬರುತ್ತಿದ್ದಾರೆ. ಸುಮಾರು 2000 ದಿಂದ 3000 ಹೊರರೋಗಿಗಳು ನಿತ್ಯ ಆಸ್ಪತ್ರೆಗೆ ಬರುತ್ತಿದ್ದಾರೆ. ರೋಗಿಗಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ನುಡಿದರು.