ವೈದ್ಯಕೀಯ ಕಾಲೇಜ್ ಜೊತೆಗೆ ಮೆಡಿಕಲ್-ಎನಿಮಲ್ ಹಬ್ ಚಿಂತನೆ: ಅಶೋಕ್ ರೈ

KannadaprabhaNewsNetwork |  
Published : Mar 24, 2025, 12:36 AM IST
ಫೋಟೊ: ೨೩ಪಿಟಿಆರ್ ೧ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣ ಕುರಿತು ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಿತು | Kannada Prabha

ಸಾರಾಂಶ

ಪುತ್ತೂರು ತಾಲೂಕಿನ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿರುವ ಜಾಗವಾದ ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತ ಅಭಿಪ್ರಾಯ ಸಂಗ್ರಹದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕು ಕೇಂದ್ರಕ್ಕೆ ಮೆಡಿಕಲ್‌ ಕಾಲೇಜು ಯಾವತ್ತೂ ಬರುವುದಿಲ್ಲ ಎಂಬ ಮಾತುಗಳು ಸಾಕಷ್ಟು ಕೇಳಿಬಂದಿದ್ದವು. ಆದರೆ ಸತತ ಪ್ರಯತ್ನಕ್ಕೆ ಬಜೆಟ್‌ನಲ್ಲಿ ಬೆಲೆ ಬಂದಿದೆ. ೨೦ ಎಕರೆ ಪ್ರದೇಶ ಮೆಡಿಕಲ್ ಕಾಲೇಜಿಗೆ ಬೇಕಾಗುತ್ತದೆ. ಉಳಿದ ಜಾಗದಲ್ಲಿ ಮುಂದೆ ಆರ್ಯುವೇದಿಕ್ ಕಾಲೇಜು, ನರ್ಸಿಂಗ್ ಕಾಲೇಜು ಕೂಡ ಮಾಡಲು ಅನುಕೂಲವಾಗಬಹುದು. ಮೆಡಿಕಲ್-ಎನಿಮಲ್ ಹಬ್ ಮಾಡುವ ಚಿಂತನೆಯೂ ಇದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಅವರು ಭಾನುವಾರ ಪುತ್ತೂರು ತಾಲೂಕಿನ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿರುವ ಜಾಗವಾದ ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತ ಅಭಿಪ್ರಾಯ ಸಂಗ್ರಹದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಆರೋಗ್ಯ ಇಲಾಖೆಯ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗುರುಪ್ರಸಾದ್ ಮಾತನಾಡಿ, ಪುತ್ತೂರಿಗೆ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾದ ಮರುದಿನವೇ ಇಲಾಖೆಯ ಕೇಂದ್ರ ಕಚೇರಿಯಿಂದ ಆದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೇಡಿಯಾಪು ಬಳಿಯ ೪೦ ಎಕರೆ ಪ್ರದೇಶವನ್ನು ಜಿಪಿಎಸ್ ಮೂಲಕ ಪರಿಶೀಲನೆ ನಡೆಸಲಿದ್ದೇವೆ. ಪ್ರಥಮ ಹಂತದಲ್ಲಿ ೨೫ ಸಾವಿರದಿಂದ ೩೦ ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ಮೊದಲ ಹಂತದ ಅಭಿವೃದ್ಧಿ ಕಾರ್ಯನಡೆಯಲಿದೆ. ೩೦೦ ಬೆಡ್ ಹಾಗೂ ೨೫೦ ವಿದ್ಯಾರ್ಥಿಗಳ ವ್ಯವಸ್ಥೆಗೆ ಪೂರಕವಾಗಿ ನಡೆಯಲಿದೆ. ಪ್ರಸ್ತುತ ನಾವು ವರದಿ ತಯಾರಿಸಿ ಸರ್ಕಾರಕ್ಕೆ ನೀಡಲಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಇರುವ ತಾಲೂಕು ಆಸ್ಪತ್ರೆಯ ಕಟ್ಟಡಗಳು ಹಳೆಯದಾಗಿವೆ. ೪ ಸಾವಿರ ಚದರ ಮೀ. ನಷ್ಟು ಚಿಕ್ಕ ಜಾಗದಲ್ಲಿರುವ ಜಾಗದಲ್ಲಿ ಐಪಿಎಚ್‌ಎಸ್ ಹಾಗೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಅಸಾಧ್ಯವಾಗಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಗೈಡ್‌ಲೆನ್ಸ್ ಪ್ರಕಾರ ಇಲ್ಲಿ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಸೇಡಿಯಾಪು ಬಳಿಯ ಹೊಸ ಜಾಗದಲ್ಲೇ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಲ್ಲಿನ ಪ್ರಾಕೃತಿಕ ಪರಿಸರವನ್ನು ಆದಷ್ಟು ಉಳಿಸಿಕೊಂಡು ಆಸ್ಪತ್ರೆಯ ನಿರ್ಮಾಣಕ್ಕೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ತಾನು ಮೆಡಿಕಲ್ ಕಾಲೇಜಿಗೆ ಜಾಗವನ್ನು ಮೀಸಲಿಡುವ ಸಂದರ್ಭ ಯು.ಟಿ. ಖಾದರ್, ರಮಾನಾಥ ರೈ ಬೆಂಬಲಿಸಿದ್ದರು. ಇದೀಗ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಬರುವಂತೆ ಮಾಡಿರುವ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾರ್ಹರು. ಎಲ್ಲ ತಾಲೂಕುಗಳಿಗೂ ಸೇಡಿಯಾಪು ಕೇಂದ್ರ ಸ್ಥಳವಾಗಿದೆ. ಸುತ್ತಮುತ್ತಲಿನ ಪಡ್ನೂರು, ಬನ್ನೂರು, ಪೆರ್ನೆ, ಕೆದಿಲ ಸೇರಿದಂತೆ ಎಲ್ಲಾ ಗ್ರಾಮಗಳಿಂದಲೂ ಇಲ್ಲಿಗೆ ಸುಲಭ ಸಂಪರ್ಕ ರಸ್ತೆಗಳಿವೆ. ಅಲ್ಲದೆ ಸಂಪಾಜೆ, ಮುಳ್ಳೇರಿಯಾ, ಕಾಸರಗೋಡು, ಗುಂಡ್ಯ ಪ್ರದೇಶಗಳಿಂದಲೂ ಇಲ್ಲಿಗೆ ಆಗಮಿಸಲು ಕೇಂದ್ರವಾಗಲಿದೆ ಎಂದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು.ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೆ.ಪಿ. ಆಳ್ವ, ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ, ಜಾಗ ದಾನಿ ಸೇಡಿಯಾಪು ಜನಾರ್ದನ ಭಟ್, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ ಮತ್ತು ಈಶ್ವರ ಬೇಡೇಕರ್, ಆರೋಗ್ಯ ಇಲಾಖೆಯ ಸಹಾಯಕ ಎಂಜಿನಿಯರ್‌ ಸುಧಾಕರ್, ಪುಡಾ ಸದಸ್ಯ ನಿಹಾಲ್ ಶೆಟ್ಟಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!