ಚಿಕ್ಕಮಗಳೂರು : ಮಗಳ ಮನೆಗೆ ಶುಂಠಿ ನಾಟಿ ಮಾಡುವ ಸಂಬಂಧ ಆಗಮಿಸಿದ್ದ ಮಹಿಳೆ ಸಿಡಿಲಿಗೆ ಬಲಿ

KannadaprabhaNewsNetwork |  
Published : Mar 24, 2025, 12:36 AM ISTUpdated : Mar 24, 2025, 12:26 PM IST
ಚಿಕ್ಕಮಗಳೂರಿನಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ವಿಜಯಪುರ ಬಡಾವಣೆಯಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರು, ಕಾಫಿ ನಾಡಿನಲ್ಲಿ ಭಾನುವಾರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ.ಶುಂಠಿ ನಾಟಿ ಮಾಡುವ ವೇಳೆಯಲ್ಲಿ ಸಿಡಿಲು ಬಡಿದು ನಾಗಮ್ಮ (65) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊದಲ ಮಳೆಗೆ ಮೊದಲ ಬಲಿಯಾಗಿದೆ.

 ಚಿಕ್ಕಮಗಳೂರು : ಕಾಫಿ ನಾಡಿನಲ್ಲಿ ಭಾನುವಾರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ.

ಶುಂಠಿ ನಾಟಿ ಮಾಡುವ ವೇಳೆಯಲ್ಲಿ ಸಿಡಿಲು ಬಡಿದು ನಾಗಮ್ಮ (65) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊದಲ ಮಳೆಗೆ ಮೊದಲ ಬಲಿಯಾಗಿದೆ.

ಬೇಲೂರು ಮೂಲದ ನಾಗಮ್ಮ ಚಿಕ್ಕಮಗಳೂರಿನ ಕುರುಬರಹಳ್ಳಿಯ ತನ್ನ ಮಗಳ ಮನೆಗೆ ಶುಂಠಿ ನಾಟಿ ಮಾಡುವ ಸಂಬಂಧ ಆಗಮಿಸಿದ್ದರು. ನಾಗಮ್ಮ ಸೇರಿದಂತೆ 12 ಮಂದಿ ನಾಟಿ ಕೆಲಸಕ್ಕೆ ಹೋಗಿದ್ದು, ಭಾನುವಾರ ದಿಢೀರ್‌ ಮಳೆ ಬಂದಿದೆ. ಆಗಲೂ ಸಹ ನಾಟಿ ಮಾಡುವುದನ್ನು ಮುಂದುವರಿಸಲಾಗಿದ್ದು, ಈ ವೇಳೆಯಲ್ಲಿ ಸಿಡಿಲು ಬಡಿದು ನಾಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕಿನ ಹಲವೆಡೆ ಭಾನುವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ತಂಪೆರೆದ ಮಳೆ:  ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭೌಗೋಳಿಕ ಪ್ರದೇಶ ಮಲೆನಾಡು. ಇಲ್ಲಿನ ವಾತಾವರಣ ಕೂಲ್‌ ಕೂಲಾಗಿರುತ್ತದೆ. ಆದರೆ, ಕಳೆದ ಫೆಬ್ರವರಿ ಮಾಹೆಯಿಂದ ಸುಡು ಬಿಸಿಲಿನ ಝಳಕ್ಕೆ ಜಿಲ್ಲೆ ತತ್ತರಿಸಿದೆ. ಮಧ್ಯಾಹ್ನದ ವೇಳೆಗೆ ಜನರು ಮನೆಯಿಂದ ಹೊರಗೆ ಬರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು.

ಆದರೆ, ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಮಲೆನಾಡಿನ ಕೆಲವೆಡೆ ಆಗಾಗ ಮಳೆ, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಚಿಕ್ಕಮಗಳೂರು ನಗರದಲ್ಲಿ ಶನಿವಾರ ಮಧ್ಯಾಹ್ನ ಸಾಧಾರಣ ಮಳೆ ಬಂದಿತ್ತು. ಭಾನು ವಾರ ಮಧ್ಯಾಹ್ನ 1.30ಕ್ಕೆ ಆರಂಭವಾದ ಮಳೆ ಸಂಜೆ ವರೆಗೆ ಮುಂದುವರಿದಿತ್ತು. ಕೆಲವೆಡೆ ಧಾರಾಕಾರವಾಗಿ ಬಂದಿದ್ದರೆ ಮತ್ತೆ ಕೆಲವೆಡೆ ಸಾಧಾರಣವಾಗಿ ಬಂದಿದೆ.

ಗುಡುಗು, ಆಲಿಕಲ್ಲು ಸಹಿತ ಮಳೆಯಾಗಿದ್ದು, ಬಲವಾಗಿ ಬೀಸಿದ ಗಾಳಿಗೆ ಇಲ್ಲಿನ ಬಸವನಹಳ್ಳಿ ಸೇರಿದಂತೆ ಕೆಲವೆಡೆ ಮರ ಗಳ ಟೊಂಗೆಗಳು ಬಿದ್ದರಿಂದ ವಿದ್ಯುತ್‌ ಸಂಪರ್ಕದಲ್ಲಿ ಅಡಚಣೆ ಉಂಟಾಗಿತ್ತು. ಮಳೆ ಬೀಳುವ ವೇಳೆಯಲ್ಲಿ ವಾಹನಗಳ ಸವಾರರು ಕೂಡ ಸ್ವಲ್ಪ ಸಮಯ ಅಲ್ಲಲ್ಲಿ ನಿಲ್ಲಬೇಕಾಯಿತು.

ತೆರೆದ ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ತಗ್ಗಿನ ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತಿದ್ದ ರಿಂದ ಜನರಿಗೆ ತೊಂದರೆಯಾಗಿತ್ತು. ಮಳೆ ಬಂದಿದ್ದರಿಂದ ಮಧ್ಯಾಹ್ನದ ನಂತರ ಚಿಕ್ಕಮಗಳೂರಿನ ವಾತಾವರಣ ತಂಪಾಗಿಸಿತು.

ಮಲೆನಾಡಿನಲ್ಲಿ ಮಳೆ :  ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕೊಪ್ಪ, ಕಳಸ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಆಗಾಗ ಮಳೆ ಬರುತ್ತಿರುವುದರಿಂದ ಕಾಫಿ ಬೆಳೆಗಾರರು ಮಾತ್ರದಲ್ಲಿ ರೈತಾಪಿ ವರ್ಗವೂ ಖುಷಿಯಾಗಿದೆ.

ಕಾಫಿ ಗಿಡಗಳು ಹೂವು ಬಿಟ್ಟಿವೆ. ತೋಟಗಳಿಗೆ ನೀರು ಹಾಯಿಸುವ ಕೆಲಸ ಕಡಿಮೆ ಮಾಡಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಅಲ್ಲಲ್ಲಿ ಕಂಡು ಬರುತ್ತಿದ್ದ ಕಾಡ್ಗಿಚ್ಚು ಕಡಿಮೆಯಾಗಲಿದೆ. ಮಂಗನ ಕಾಯಿಲೆ ಪ್ರಕರಣಗಳು ಕೂಡ ನಿಯಂತ್ರಣಕ್ಕೆ ಬರಲಿವೆ.

23 ಕೆಸಿಕೆಎಂ 2ಚಿಕ್ಕಮಗಳೂರಿನಲ್ಲಿ ಭಾನುವಾರ ಸುರಿದ ಮಳೆಯಿಂದ ವಿಜಯಪುರ ಬಡಾವಣೆಯಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದು. 23 ಕೆಸಿಕೆಎಂ 3ಚಿಕ್ಕಮಗಳೂರಿನಲ್ಲಿ ಭಾನುವಾರ ಬಲವಾಗಿ ಬೀಸಿದ ಗಾಳಿಗೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಮರದ ಕೊಂಬೆ ಬಿದ್ದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!