ಸಂವಿಧಾನದಿಂದ ಮಹಿಳೆಯರಿಗೆ ಸಮಾನತೆ, ಹಕ್ಕು ಸಿಕ್ಕಿದೆ

KannadaprabhaNewsNetwork |  
Published : Mar 24, 2025, 12:36 AM IST
ಫೋಟೋ 23ಎಚ್‌ಎಸ್‌ಡಿ6  : ರೋಟರಿ ಬಾಲಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾರತಿ ಆರ್.ಬಣಕಾರ್ ಉದ್ಗಾಟಿಸಿದರು.  | Kannada Prabha

ಸಾರಾಂಶ

ರೋಟರಿ ಬಾಲಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾರತಿ ಆರ್.ಬಣಕಾರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ, ಹಕ್ಕು, ಬಾಧ್ಯತೆ ನೀಡಿದೆ ಎಂದು ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ತಿಳಿಸಿದರು.

ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ವರ್ಷವೂ ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಹಿಳೆಯ ಮೇಲಾಗುವ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ನಿಂತಿಲ್ಲ. ಕಾನೂನಿನಲ್ಲಿ ಮಹಿಳೆಗೆ ಸಾಕಷ್ಟು ರಕ್ಷಣೆಯಿದೆ. ಹೆಣ್ಣು ಅಬಲೆಯಲ್ಲ. ಸಬಲೆ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಪುರಷನಿಗೆ ಸರಿಸಮನಾಗಿ ದುಡಿಯುತ್ತಿರುವ ಹೆಣ್ಣಿಗೆ ಅನುಕಂಪ ಬೇಕಿಲ್ಲ. ಸ್ವಾವಲಂಭಿಯಾಗಿ ದುಡಿದು ಜೀವಿಸಲು ಅವಕಾಶ ಸಿಕ್ಕಾಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಲೈಂಗಿಕ ದೌರ್ಜನ್ಯ ಹೆಚ್ಚಳವಾಗುತ್ತಿರುವುದರಿಂದ ಹೆಣ್ಣು ಮಕ್ಕಳು ಜಾಸ್ತಿ ಶಿಕ್ಷಣ ಪಡೆಯಲು ಆಗುತ್ತಿಲ್ಲ. ಅಪ್ರಾಪ್ತ ವಯಸ್ಸಿಗೆ ವಿವಾಹ ಮಾಡುವುದು ಅಕ್ಷಮ್ಯ ಅಪರಾಧ. ಇದರಿಂದ ಪೋಷಕರಿಗೂ ಶಿಕ್ಷೆಯಾಗುತ್ತದೆ. ಹೆಣ್ಣು-ಗಂಡೆಂಬ ವ್ಯತ್ಯಾಸ ಬೇಡ. ಹೆಣ್ಣಿಗೆ ಗಂಡಿನಷ್ಟೆ ಸಮಾನವಾದ ಶಿಕ್ಷಣ ಬೇಕು. ತಾಯಂದಿರು ಮಕ್ಕಳ ಮೇಲೆ ನಿಗಾ ಇಡಬೇಕು. ಶಿಕ್ಷಣದ ಜೊತೆ ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಇಲಾಖೆಯಿಂದ ಸ್ತ್ರೀಶಕ್ತಿ ಸಂಘಗಳನ್ನು ರಚಿಸಲಾಗಿದೆ.15 ರಿಂದ 10 ಮಹಿಳೆಯರು ಸೇರಿ ಒಂದು ಸಂಘವನ್ನು ಕಟ್ಟಿಕೊಳ್ಳಬಹುದು. ಇದರಿಂದ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಹಾಯವಾಗಲಿದೆ. ಸಾಂತ್ವನ, ಸಖಿ ಯೋಜನೆಗಳಿವೆ. ಇದರಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳು ದೊರಕುತ್ತವೆ. ದೇವದಾಸಿ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರು, ಎಚ್ಐವಿ ಸೋಂಕಿತ ಮಹಿಳೆಯರಿಗೆ ಆಶ್ರಯವಿದೆ. ಮಹಿಳೆಯರ ರಕ್ಷಣೆಗಾಗಿಯೇ ಮಹಿಳಾ ಆಯೋಗವಿದೆ ಎಂದು ಹೇಳಿದರು.

ಮಂಜುನಾಥ್ ಭಾಗವತ್ ಮಾತನಾಡಿ, ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತವೆಂಬ ನಂಬಿಕೆಯಿದೆ. ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಲಿವೆ. ಮಹಿಳೆಯರು ಪುರುಷರಿಗಿಂತ ಕಮ್ಮಿಯಿಲ್ಲ. ಎಲ್ಲಾ ರಂಗಗಳಲ್ಲಿಯೂ ತನ್ನ ಶಕ್ತಿ ಸಾಮರ್ಥವನ್ನು ಪ್ರದರ್ಶಿಸುತ್ತಿದ್ದಾಳೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಪುರುಷರಿಗಿಂತ ಮಹಿಳೆ ಮೇಲಿದ್ದಾಳೆಂದು ನುಡಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ರವಿ ಅಂಬೇಕರ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್, ಶಿವರಾಂ ಇದ್ದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ