ಬಸವಣ್ಣ ತತ್ವಗಳ ಚಿಂತನೆ ಅಗತ್ಯ: ಟಿ.ಎಂ. ಭಾಸ್ಕರ

KannadaprabhaNewsNetwork | Published : Sep 26, 2024 10:09 AM

ಸಾರಾಂಶ

ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳು ಪರಿಹಾರವಾಗಿರುವುದರಿಂದ ಅವರ ತತ್ವಗಳ ಮೇಲೆ ನಾಡನ್ನು ಪ್ರಗತಿಯತ್ತ ಸಾಗಿಸಬಹುದಾಗಿದೆ ಎಂದು ಗೊಟಗೋಡಿ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಹೇಳಿದರು.

ಶಿಗ್ಗಾಂವಿ: ಪ್ರಸ್ತುತ ಸಮಾಜದಲ್ಲಿ ಬಸವಣ್ಣನ ತತ್ವಗಳ ಕುರಿತು ಚಿಂತನೆ ಮಾಡುವ ಅವಶ್ಯಕತೆ ಇದೆ ಎಂದು ಗೊಟಗೋಡಿ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಹೇಳಿದರು.

ತಾಲೂಕಿನ ಗೊಟಗೋಡಿಯ ಜಾನಪದ ವಿವಿಯ ಮಲ್ಲಿಗೆ ದಂಡೆ ಸಭಾಭವನದಲ್ಲಿ ಸಂತೋಧಾರ ಜೈ ಸಂತೋಷಿಮಾತಾ ಸಂಸ್ಥಾನ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳು ಪರಿಹಾರವಾಗಿರುವುದರಿಂದ ಅವರ ತತ್ವಗಳ ಮೇಲೆ ನಾಡನ್ನು ಪ್ರಗತಿಯತ್ತ ಸಾಗಿಸಬಹುದಾಗಿದೆ. ಬಸವಣ್ಣನವರ ವಿಚಾರಗಳನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮೌಲ್ಯಯುತ ಜೀವನ ಮತ್ತು ಆದರ್ಶಮಯ ವ್ಯಕ್ತಿತ್ವ ಹೊಂದಬಹುದಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಿನ ಗೌರವಾಧ್ಯಕ್ಷ ಎಂ.ಬಿ. ಹಳೆಮನಿ ಮಾತನಾಡಿ, ಬಸವಣ್ಣನವರ ಜೀವನವೇ ಆದರ್ಶಮಯವಾಗಿರುವುದರೊಂದಿಗೆ ಅನುಕರಣೀಯವೂ ಆಗಿದೆ. ಬಸವಣ್ಣನವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಕ ಲೋಕಕ್ಕೆ ಮೆರಗು ನೀಡಿದವರಾಗಿದ್ದು, ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿದ್ದು ಪ್ರಸ್ತುತವಾಗಿದೆ ಎಂದರು.

ಸುಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಶಾಲಾ ವಿದ್ಯಾರ್ಥಿಗಳು ಬಸವಣ್ಣನವರ ವಚನ ಗಾಯನ ಮತ್ತು ವಾಚನ ಮಾಡಿದರು.

ಸಂತೋಧಾರ ಜೈ ಸಂತೋಷಿಮಾತಾ ಸಂಸ್ಥಾನದ ಅಧ್ಯಕ್ಷೆ ಸಂತೋಷಿ ಮಾತಾ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ವಿಶ್ವನಾಥ ಬಂಡಿವಡ್ಡರ, ದೇವರಾಜ ಸುಣಗಾರ, ಮಾಲತೇಶ ನಾಯ್ಕೋಡಿ, ಡಾ. ಲಕ್ಷ್ಮಣ ಶಿವಳ್ಳಿ, ಡಾ. ನೇಮಾವತಿ ಶಿವಳ್ಳಿ, ನೀಲಾ ವನಹಳ್ಳಿ, ಸುಷ್ಮಾ ಕಮ್ಮಾರ, ವಿಜಯಲಕ್ಷ್ಮೀ ಕೌದಿ, ಕಲಾವತಿ ಅಕ್ಕಿ ಇತರರಿದ್ದರು.

Share this article