ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿ ಜಾರಿ ಮಾಡಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Sep 15, 2024, 01:54 AM ISTUpdated : Sep 15, 2024, 01:16 PM IST
14ಕೆಎಂಎನ್ ಡಿ26 | Kannada Prabha

ಸಾರಾಂಶ

ಪ್ರವಾಸೋದ್ಯಮದಿಂದ ಬೇಕಾದಷ್ಟು ಲಾಭ ಮಾಡಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾದ ಖರ್ಚು ಭರಿಸಲು ನಮ್ಮ ಸರ್ಕಾರ ತಯಾರಿದೆ. ಕರ್ನಾಟಕ ತೆರಿಗೆ ಕೊಡುವುದರಲ್ಲಿ 2ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮದಲ್ಲಿ ಬರುವ ಆದಾಯದಲ್ಲಿ ರಾಜ್ಯ ನಡೆಸುವ ಯೋಚನೆ ನಮ್ಮದಲ್ಲ.

 ಮಳವಳ್ಳಿ :  ಕರ್ನಾಟಕದಲ್ಲಿನ ಪ್ರಕೃತಿ ದತ್ತವಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಆವರಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ನೋಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಎರಡು ಜಲಪಾತಗಳಿಗೆ ಅನುದಾನವನ್ನು ನೀಡಿ ಮುಂದಿನ ದಿನಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪ್ರವಾಸೋದ್ಯಮದಿಂದ ಬೇಕಾದಷ್ಟು ಲಾಭ ಮಾಡಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾದ ಖರ್ಚು ಭರಿಸಲು ನಮ್ಮ ಸರ್ಕಾರ ತಯಾರಿದೆ. ಕರ್ನಾಟಕ ತೆರಿಗೆ ಕೊಡುವುದರಲ್ಲಿ 2ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮದಲ್ಲಿ ಬರುವ ಆದಾಯದಲ್ಲಿ ರಾಜ್ಯ ನಡೆಸುವ ಯೋಚನೆ ನಮ್ಮದಲ್ಲ ಎಂದು ಹೇಳಿದರು.

ಪುರಿಗಾಲಿ ಹನಿ ನೀರಾವರಿ ಯೋಜನೆ ನಾನೇ ಮಂಜೂರು ಮಾಡಿದ್ದೆ. ಈಗ ಯೋಜನೆ ಕಾಮಗಾರಿ ಪೂರ್ಣವಾಗುತ್ತಿದೆ. ಮತ್ತೆ ನಾನೇ ಬಂದು ಆ ಯೋಜನೆ ಉದ್ಘಾಟನೆ ಮಾಡುತ್ತೇನೆ. ವಿಸಿ ನಾಲೆಯಿಂದ ಮಳವಳ್ಳಿ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ನರೇಂದ್ರಸ್ವಾಮಿ ಅವರು ಗಮನಕ್ಕೆ ತಂದಿದ್ದಾರೆ. ಕೂಡಲೇ ನಾಲಾ ಆಧುನೀಕರಣ ಪ್ರಸ್ತಾವನೆ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ರೈತ ಮಕ್ಕಳು ಎಂದು ಹೇಳಿ ಕೇಂದ್ರ ಮಂತ್ರಿ ಆಗಿರುವವರು ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಮೇಕೆದಾಟುಗೆ ಅನುಮತಿ ಕೊಡಿಸಲಿ, ಈ ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾದರೂ ತಡೆ ಮಾಡುತ್ತಿದ್ದಾರೆ. ಅವರಿಗೆ ಬುದ್ಧಿ ಇಲ್ಲ. ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ಬಿಜೆಪಿ- ಜೆಡಿಎಸ್‌ನವರಂತೆ ಜನಾಂಗವನ್ನು ಎತ್ತಿಕಟ್ಟುವುದಿಲ್ಲ. ಯಾವುದೇ ದ್ವೇಷದ ರಾಜಕಾರಣ ಮಾಡಲ್ಲ. ಒಂದೇ ತಾಯಿ ಮಕ್ಕಳಂತೆ ನಾವೆಲ್ಲರೂ ಬದುಕುವುದನ್ನು ಕಲಿಯಬೇಕು. ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ಆ ದಿಕ್ಕಿನಲ್ಲಿ ನಮ್ಮ ಕೆಲಸವೂ ಸಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಬಾಲಕೃಷ್ಣ, ಮಂಜುನಾಥ್, ವಿಧಾನಪರಿಷತ್ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷ ಸ್ಟಾರ್ ಚಂಧ್ರು, ದಡದಪುರ ಶಿವಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಐಜಿ ಬೋರಲಿಂಗಯ್ಯ ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ