ಪೊಲೀಸ್, ಕಂದಾಯ, ಲೋಕೋಪಯೋಗಿ ಹಾಗೂ ಮಹಾನಗರ ಪಾಲಿಕೆ ನೆರವಿನಲ್ಲಿ ಸ್ಟ್ರೀಟ್ ಫುಡ್ ಫಿಯೇಸ್ಟಾವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ 25 ಲಕ್ಷ ರು. ಮೊತ್ತವನ್ನು ಬಾಡಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೂರನೇ ವರ್ಷದ ‘ಸ್ಟ್ರೀಟ್ ಫುಡ್ ಫಿಯೇಸ್ಟಾ’ 2025 ಜನವರಿ 15 ರಿಂದ 19 ರ ವರೆಗೆ ಐದು ದಿನಗಳ ಕಾಲ ಮಂಗಳೂರು ನಗರದಲ್ಲಿ ನಡೆಯಲಿದೆ.
ಮಂಗಳೂರಿನ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಪ್ರತಿಷ್ಠಾನದ ಮಾರ್ಗದರ್ಶಕರಾದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಈ ಬಾರಿಯ ಸ್ಟ್ರೀಟ್ ಫುಡ್ ಫಿಯೇಸ್ಟಾದ ದಿನಾಂಕ ಪ್ರಕಟಿಸಿದರು.
ಬಳಿಕ ಮಾತನಾಡಿದ ವೇದವ್ಯಾಸ್ ಕಾಮತ್, ಮೂರನೇ ವರ್ಷದ ಸ್ಟ್ರೀಟ್ ಫುಡ್ ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲು ಇಲ್ಲಿರುವ ದೇವರ ಮಕ್ಕಳ ಎದುರು ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗಿನಿಂದ ಮಕ್ಕಳಿಗೆ ವಿಶೇಷ ಆಹಾರ, ಆಟವಾಡಲು ವ್ಯವಸ್ಥೆ ಕಲ್ಪಿಸಿ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇವೆ. ಈ ಬಾರಿ ಜ.15 ರಿಂದ 19 ರ ವರೆಗೆ ಐದು ದಿನಗಳ ಕಾಲ ಸ್ಟ್ರೀಟ್ ಫುಡ್ ಫಿಯೇಸ್ಟಾ ನಡೆಯಲಿದೆ ಎಂದರು.
ಪ್ರಮುಖ ರಸ್ತೆಗಳಲ್ಲಿ ಸ್ಟ್ರೀಟ್ ಫುಡ್ ಫಿಯೇಸ್ಟಾ:
ಕಳೆದ ಬಾರಿಯಂತೆ ನಾರಾಯಣಗುರು ಸರ್ಕಲ್, ಪಬ್ಬಾಸ್ ಐಸ್ ಕ್ರೀಮ್, ಹಿಂದಿ ಪ್ರಚಾರ ಸಮಿತಿ ಸುತ್ತಮುತ್ತಲಿನ ಮಾರ್ಗ ಹಾಗೂ ಕರಾವಳಿ ಉತ್ಸವ ಮೈದಾನದಲ್ಲಿ ಆಹಾರಮೇಳ ಆಯೋಜಿಸಲಾಗಿದೆ. ಇದರ ಜೊತೆಗೆ ಮಕ್ಕಳಿಗೆ ವಿಶೇಷ ಪ್ಲೇ ಏರಿಯಾ, ಮನೋರಂಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಕೆಸ್ಟ್ರಾ, ಹುಟ್ಟುಹಬ್ಬದ ಆಚರಣೆ, ಸೆಲ್ಫಿ ಝೋನ್ ಸಹಿತ ವಿವಿಧ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಆಯೋಜಿಸಲಾಗಿದೆ ಎಂದರು.ವೆಜ್-ನಾನ್ ವೆಜ್ ಪ್ರತ್ಯೇಕ: ಪ್ರತಿನಿತ್ಯ ಸಂಜೆ 4 ಗಂಟೆಯಿಂದ ರಾತ್ರಿ 10.30 ರ ವರೆಗೆ ಸ್ಟ್ರೀಟ್ ಫುಡ್ ಫಿಯೇಸ್ಟಾ ನಡೆಯಲಿದೆ. ಪ್ರಾರಂಭ ಮತ್ತು ಅಂತ್ಯದ ದಿನಗಳಲ್ಲಿ ಮಧ್ಯಾಹ್ನ ಸ್ವಲ್ಪ 2 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಏರ್ಪಡಿಸಲಾಗಿದೆ. 250ಕ್ಕೂ ಹೆಚ್ಚು ಫುಡ್ ಸ್ಟಾಲ್ ಗಳಲ್ಲಿ ಕರಾವಳಿಯ ವಿಶೇಷ ತಿನಿಸುಗಳು ಮಾತ್ರವಲ್ಲದೆ ಬೇರೆ ರಾಜ್ಯಗಳ ಆಹಾರ ಸವಿಯಲು ಅವಕಾಶ ಕಲ್ಪಿಸಲಾಗಿದೆ. ವೆಜ್ ಮತ್ತು ನಾನ್ ವೆಜ್‌ಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ಸ್ಟ್ರೀಟ್ ಫುಡ್ ಫಿಯೇಸ್ಟಾದಿಂದ ಆದಾಯ ಲಭಿಸಿದರೆ ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ಸಮಾಜಸೇವಾ ನಿಧಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗುವುದು. ಈ ಬಾರಿ 250ಕ್ಕೂ ಅಧಿಕ ಸ್ಟಾಲ್‌ಗಳ ಗುರಿ ಇದೆ ಎಂದರು. ಮಂಗಳೂರು ಮಾದರಿ ಎಲ್ಲೆಡೆ ವಿಸ್ತರಣೆ:
ಪ್ರತಿಷ್ಠಾನ ಮಾರ್ಗದರ್ಶಕ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಂಗಳೂರಿನಲ್ಲಿ ಹಿಂದಿನ ಎರಡು ಫುಡ್ ಫೆಸ್ಟಿವಲ್ ಯಶಸ್ವಿಯಾಗಿದ್ದು ಅದರಿಂದ ಪ್ರೇರೇಪಿತರಾಗಿ ರಾಜ್ಯದೆಲ್ಲೆಡೆ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಂಗಳೂರಿನ ವಿಶೇಷ ಆಹಾರ ಖಾದ್ಯಗಳು ಇಂದು ಎಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದ್ದು ಹೊರಗಿನಿಂದ ಬಂದವರಿಗೆ ಇಲ್ಲಿನ ಸಂಸ್ಕೃತಿ ಸೊಗಡು ಪರಿಚಯಿಸಿಕೊಳ್ಳುತ್ತಿದ್ದು, ಪ್ರವಾಸೋದ್ಯಮಕ್ಕೂ ಒತ್ತು ನೀಡಿದಂತಾಗಿದೆ ಎಂದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ್ ಇದ್ದರು.
ಟ್ರಾಫಿಕ್ ಜಾಮ್ ಇಲ್ಲ, ಸುಗಮ ಸಂಚಾರಕ್ಕೆ ಕ್ರಮ
ಈ ಬಾರಿ ಸ್ಟ್ರೀಟ್ ಫುಡ್ ಫಿಯೇಸ್ಟಾ ಸಲುವಾಗಿ ಐದು ದಿನಗಳ ಕಾಲ ಸಂಚಾರ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಎಲ್ಲ ರೀತಿಯ ಏರ್ಪಾಟು ಮಾಡಲಾಗಿದೆ.
ಪೊಲೀಸ್, ಕಂದಾಯ, ಲೋಕೋಪಯೋಗಿ ಹಾಗೂ ಮಹಾನಗರ ಪಾಲಿಕೆ ನೆರವಿನಲ್ಲಿ ಸ್ಟ್ರೀಟ್ ಫುಡ್ ಫಿಯೇಸ್ಟಾವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ 25 ಲಕ್ಷ ರು. ಮೊತ್ತವನ್ನು ಬಾಡಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.