ಮಾನವ ಪರಿಸರದಲ್ಲಿ ಸಂಕೀರ್ಣ ಕಾರ್ಯ ಕಲಿಯಲು ಮತ್ತು ನಿರ್ವಹಿಸಲು ಕೃತಕ ಬುದ್ಧಿಮತ್ತೆ ಬಳಕೆ ಆಗಬೇಕಿದೆ
ಕುಕನೂರು: ಯುವ ಪೀಳಿಗೆ ಝೆಡ್ ಝೇನ್ ಜನರೇಷನಿಗೆ ಹೊಂದಿಕೊಳ್ಳಬೇಕು.ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಆ ನಿಟ್ಟಿನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ 30ಎಐ ಹ್ಯೂಮಾನೀಟಿ ರೊಬೊಟ್ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಪಿಯುಸಿ ಕಾಲೇಜ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಪರಿಸರದಲ್ಲಿ ಸಂಕೀರ್ಣ ಕಾರ್ಯ ಕಲಿಯಲು ಮತ್ತು ನಿರ್ವಹಿಸಲು ಕೃತಕ ಬುದ್ಧಿಮತ್ತೆ ಬಳಕೆ ಆಗಬೇಕಿದೆ. ನೈಸರ್ಗಿಕ ಭಾಷೆ, ದೃಷ್ಟಿ ಮತ್ತು ಮಾನವನಂತಹ ಚಲನೆಗಾಗಿ ಸುಧಾರಿತ ಏಐ ರೋಬೋಟ್ ಬಳಕೆ ಮಾಡುವ ಅವಶ್ಯಕತೆ ಇದೆ. ಹಾಗಾಗಿ ವಿದೇಶದಲ್ಲೂ ಸಹ ಅಧ್ಯಯನ ಮಾಡಿದ್ದೇನೆ. ಕ್ಷೇತ್ರಕ್ಕೆ ಹಾಗೂ ಕ್ಷೇತ್ರದ ಶಾಲಾ, ಕಾಲೇಜುಗಳಿಗೆ ಮಕ್ಕಳಿಗಾಗಿ ಶೈಕ್ಷಣಿಕ ಅಭಿವೃದ್ಧಿಗೆ 30ಎಐ ರೊಬೊಟ್ ತರಿಸುವ ಕನಸು ಇದೆ ಎಂದರು.ಇತ್ತೀಚಿನ ಕಾಲಘಟ್ಟ ಹಣ, ಜಾತಿ, ಧರ್ಮದ ಆಧಾರ ಮೇಲೆ ರಾಜಕೀಯ ತೊಲ್ದಾಟಕ್ಕೆ ಕೆಟ್ಟು ಹೋಗಿದೆ. ಹೀಗಾದರೆ ರಾಷ್ಟ್ರಕ್ಕೆ ಮಾರಕ ಆಗಿ ಇದು ಪರಿಣಮಿಸುತ್ತದೆ. ದೇಶದ ಭವಿಷ್ಯ ಬಗ್ಗೆ ಚಿಂತನೆ ಕಡಿಮೆ ಆಗಿದೆ.ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆಯಾದರೂ ಸಹ ನೈತಿಕ, ಸತ್ಯ, ನಿಷ್ಠ ಮೌಲ್ಯ ಕುಂಠಿತವಾಗಿದೆ. ನೈತಿಕ ಮಾನವೀಯತೆ ಉಳಿಯುತ್ತಿಲ್ಲ. ಇದರ ಬಗ್ಗೆ ಗಂಭೀರ ಚಿಂತನೆ ಆಗಬೇಕಿದೆ. ಹಣ, ಉದ್ಯಮೇದಾರರು, ವ್ಯಾಪಾರಸ್ಥರು, ಗಣಿ ಮಾಲಕರು, ಕುಟುಂಬ ರಾಜಕಾರಣ ಆಸೆವುಳ್ಳವರು ರಾಜಕಾರಣಕ್ಕೆ ಬಂದು ಇಡೀ ಸಮಾಜದ ವ್ಯವಸ್ಥೆ ಹದಗೆಡುತ್ತಿದೆ.ಇದಕ್ಕೆ ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ತಳಮಟ್ಟದಿಂದ ಕೌಟುಂಬಿಕ ರಾಜಕಾರಣ ಆಸೆಯಿಂದ ಸಂಬಂಧಿಕರೇ ಅಧಿಕಾರದಲ್ಲಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಹೇಗೆ ಸಾಧ್ಯ. ಸ್ವಾಂತಂತ್ರ್ಯ ನಂತರದ ಬರೀ 12% ಅಕ್ಷರಸ್ಥರಿದ್ದ ಕಾಲದಲ್ಲಿ ದೇಶದ ಸಂಸತ್ತಿನಲ್ಲಿ ನಿಷ್ಠಾವಂತ, ಸದ್ವಿಚಾರವಂತರು ದೇಶದ ಚುಕ್ಕಾಣಿ ಹಿಡಿದ್ದರಿಂದ ದೇಶದ ಪ್ರಗತಿ ಸಾಗುತ್ತಾ ಬಂದಿತು. ಆದರೆ ಸದ್ಯ 78% ಸಾಕ್ಷರಸ್ಥರಿದ್ದರೂ ಸಹ ನನ್ನನ್ನೂ ಹಿಡಿದು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ.ಇಡೀ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿ ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಿಎಂ ಸಿದ್ದರಾಮಯ್ಯ ಬಳಿ ನಾನು ಸಹ ಬಹಳಷ್ಟು ಬಾರಿ ಚರ್ಚಿಸಿದ್ದೇನೆ. ರಾಜಕೀಯ ವ್ಯವಸ್ಥೆಯ ಶುದ್ದೀಕರಣ ಆಗಬೇಕಿದೆ ಎಂದರು.
ಝಡ್ ಝೆನ್ ಜನರೇಷನ್ ಕಾಲ ಇದು. ಅದಕ್ಕೆ ಎಲ್ಲರೂ ಹೊಂದಿಕೊಳ್ಳಬೇಕು ಎಂಬುದು ನನ್ನ ಆಸೆ.ತಂತ್ರಜ್ಞಾನ, ಬುದ್ಧಿವಂತಿಕೆಯಿಂದ ಹೊಂದಿಕೊಳ್ಳುವಿಕೆ ಆಗಬೇಕು. ಸಾಮಾಜಿಕ ಪ್ರಜ್ಞೆ,ವೈವಿಧ್ಯತೆ ಮತ್ತು ಸಮಾನತೆ ಬಗ್ಗೆ ಕಾಳಜಿ ಬರಬೇಕು ಎಂದರು.
ಡಿಡಿಪಿಯು ಜಗದೀಶ ಮಾತನಾಡಿ, ಇಡೀ ರಾಜ್ಯದಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಮಂಜೂರಾದ ಶಾಲಾ, ಕಾಲೇಜುಗಳ ಸಂಖ್ಯೆ ಇಲ್ಲ. ಶೈಕ್ಷಣೀಕವಾಗಿ ಅಭಿವೃದ್ಧಿಗೆ ಶಾಲಾ, ಕಾಲೇಜುಗಳು ಪೂರಕವಾಗಿದೆ. ಮಸಬಹಂಚಿನಾಳ ಗ್ರಾಮದಲ್ಲಿ ನಿರ್ಮಾಣ ಆಗಿರುವ ಕಾಲೇಜಿಗೆ ಟೆಬಲ್, ಸಾಮಗ್ರಿಗಳು ಸಹ ಒದಗಿವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.