ನಕಲಿ ಕಂಪನಿಗೆ ಭೋವಿ ನಿಗಮದ ₹34 ಕೋಟಿ ವರ್ಗ

KannadaprabhaNewsNetwork |  
Published : Nov 27, 2024, 01:06 AM IST
ಸಿಐಡಿ | Kannada Prabha

ಸಾರಾಂಶ

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಮುಂದುವರೆಸಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ), ಆ ನಿಗಮದಿಂದ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗೆ ಸೇರಿದ್ದು ಎನ್ನಲಾದ ಕಂಪನಿ ಸೇರಿ ಒಟ್ಟು ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ ₹34 ಕೋಟಿ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಮುಂದುವರೆಸಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ), ಆ ನಿಗಮದಿಂದ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗೆ ಸೇರಿದ್ದು ಎನ್ನಲಾದ ಕಂಪನಿ ಸೇರಿ ಒಟ್ಟು ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ ₹34 ಕೋಟಿ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದೆ.

ಇನ್ನು ಬೆಂಗಳೂರು ನಗರದಲ್ಲೇ ಕಾರ್ಯಚಟುವಟಿಕೆ ಹೊಂದಿವೆ ಎಂದು ಬಿಂಬಿಸಿಕೊಂಡಿದ್ದ ಈ ಕಂಪನಿಗಳ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳು, ಕೆಲ ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಇದೇ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ ₹34.18 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್‌ ಪ್ರೈಸ್‌ (₹7.16 ಕೋಟಿ) ಹಾಗೂ ಅವರ ಸೋದರಿ ಹೆಸರಿನಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ (₹3.79 ಕೋಟಿ) ಸೇರಿ ಒಟ್ಟು ₹10.9 ಕೋಟಿ ಸಂದಾಯವಾಗಿದೆ. ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಅವರ ಆಪ್ತರ ಪಾಲುದಾರಿಕೆ ಇದೆ. ಅಲ್ಲದೆ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳಾ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ ₹1.48 ಕೋಟಿ ವರ್ಗಾವಣೆಯಾಗಿದೆ ಎಂದು ಮೂಲಗಳು ಹೇಳಿವೆ.

ಅಕ್ರಮವು ₹90 ಕೋಟಿಗೂ ಮಿಗಿಲು:

ರಾಜ್ಯ ಸರ್ಕಾರವು ಭೋವಿ ಸಮುದಾಯದ ಅಭ್ಯುದಯಕ್ಕೆ ರೂಪಿಸಿದ್ದ ಆರ್ಥಿಕ ಯೋಜನೆಗಳಲ್ಲಿ ನಿಗಮದ ಕೆಲ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. 2018-2023ರವರೆಗೆ 5 ವರ್ಷಗಳಲ್ಲಿ ಸುಮಾರು ₹90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ. ಭೋವಿ ಜನಾಂಗದವರ ಉದ್ಯಮಕ್ಕೆ ಉತ್ತೇಜಿಸುವ ಸಲುವಾಗಿ ಜಾರಿಗೊಳಿಸಿದ್ದ ಸಾಲ ನೀಡಿಕೆ ಯೋಜನೆಯಲ್ಲಿ ಈ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಆದರೆ 2022-23ನೇ ಸಾಲಿನ ಅವ್ಯವಹಾರದ ಬಗ್ಗೆ ಮಾತ್ರ ಸಿಐಡಿ ತನಿಖೆಗೆ ಆದೇಶವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಲ ಮಂಜೂರಾತಿ ಹೆಸರಿನಲ್ಲಿ ಹಣ ಲಪಟಾಯಿಸಲು ಖೋಟಿ ಫಲಾನುಭವಿಗಳನ್ನು ಏಜೆಂಟ್‌ಗಳ ನೆರವಿನಲ್ಲಿ ಅಧಿಕಾರಿಗಳು ಸೃಷ್ಟಿಸಿದ್ದರು. ಸಾಲ ಮಂಜೂರಾತಿ ಮುನ್ನವೇ ಆ ಫಲಾನುಭವಿಗಳಿಂದ ಖಾಲಿ ಚೆಕ್‌ಗಳಿಗೆ ಅಧಿಕಾರಿಗಳು ಸಹಿ ಪಡೆಯುತ್ತಿದ್ದರು. ನೈಜವಾಗಿ ಆತನಿಗೆ ಸಿಕ್ಕಿರುವುದು ಕೇವಲ ₹50 ಸಾವಿರ ಮಾತ್ರ. ಆದರೆ ಆತನ ಹೆಸರಿನಲ್ಲಿ ಅಧಿಕಾರಿಗಳು ₹5 ಲಕ್ಷ ಸಾಲ ಮಂಜೂರು ಮಾಡಿ ಹಣ ಲಪಟಾಯಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ. -ಬಾಕ್ಸ್‌-

ಜಿಎಂ ಮನೆ ಬಾಡಿಗೆದಾರರು

ನಿಗಮದ ಮಾಜಿ ಜಿಎಂ ಬಿ.ಕೆ.ನಾಗರಾಜಪ್ಪ ಮನೆಯಲ್ಲಿ ಉದ್ಯಮಿ ಜೀವಾ ಹಾಗೂ ಆಕೆಯ ಸೋದರಿ ಸಂಗೀತಾ ಮನೆಯಲ್ಲಿ ಬಾಡಿಗೆಯಲ್ಲಿದ್ದರು. ಇದೇ ಮನೆಯನ್ನೇ ತಮ್ಮ ಸೋದರಿ ಒಡೆತನದ ಹರ್ನಿತಾ ಕ್ರಿಯೇಷನ್ಸ್‌ ಕಂಪನಿಯ ಕಚೇರಿ ಎಂದು ಮೃತ ಜೀವಾ ತೋರಿಸಿ ನಿಗಮದಿಂದ ಹಣ ವರ್ಗಾಯಿಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ. ಹಣ ವರ್ಗಾವಣೆ ವಿವರ ಹೀಗಿದೆ.

ಮಾಲಿಕರುಕಂಪನಿಹಣ (ಕೋಟಿ ₹)

ಯಶಸ್ವಿನಿನ್ಯೂ ಡ್ರೀಮ್ಸ್‌8,78,87,470

ಯಶ್ವಸಿನಿ ಸೋದರ ಕಾರ್ತಿಕ್‌ ಗೌಡಆದಿತ್ಯಾ ಎಂಟರ್‌ಪ್ರೈಸಸ್4,76,44,560

ಜೀವಾಅನ್ನಿಕಾ ಎಂಟರ್‌ಪ್ರೈಸಸ್‌7,16,52,601

ಜೀವಾ ಸೋದರಿ ಸಂಗೀತಾಹರ್ನಿತಾ ಕ್ರಿಯೇಷನ್ಸ್‌3,79,43,434

ಮಾಜಿ ಜಿಎಂ ಆಪ್ತ ಸಂತೋಷ್ ಸಿಸೋಮೇಶ್ವರ ಎಂಟರ್‌ಪ್ರೈಸಸ್‌9,66,91,911

ಒಟ್ಟು 34,18,19,976 ಕೋಟಿ

---

ಯಾರ್ಯಾರು ಪಾಲುದಾರರು

ಮಾಜಿ ಜಿಎಂ ಬಿ.ಕೆ.ನಾಗರಾಜಪ್ಪ ಅವರ ಆಪ್ತ ಸಹಾಯಕಿ (ಹೊರಗುತ್ತಿಗೆ ಆಧಾರ) ಯಶಸ್ವಿನಿ ಹೆಸರಿನಲ್ಲಿ ನ್ಯೂ ಡ್ರೀಮ್, ಆಕೆಯ ಸೋದರ ಕಾರ್ತಿಕ್‌ ಗೌಡ ಹೆಸರಿನಲ್ಲಿ ಆದಿತ್ಯಾ, ತಮ್ಮ ಮನೆ ಬಾಡಿಗೆದಾರರಾದ ಜೀವಾ ಹೆಸರಿನಲ್ಲಿ ಅನ್ನಿಕಾ ಎಂಟರ್‌ಪ್ರೈಸಸ್‌, ಆಕೆಯ ಸೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ಸ್‌ ಹಾಗೂ ಆಪ್ತ ಸಿ.ಸಂತೋಷ್‌ ಹೆಸರಿನಲ್ಲಿ ಸೋಮೇಶ್ವರ ಎಂಟರ್‌ಪ್ರೈಸಸ್‌ ಎಂಬ ಕಂಪನಿಗಳನ್ನು ಸ್ಥಾಪಿಸಿ ಮಾಜಿ ಜಿಎಂ ನಾಗರಾಜಪ್ಪ ಹಣ ಲಪಟಾಯಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.

---

-ಕೋಟ್‌-

ಭೋವಿ ನಿಗಮದ ಅಕ್ರಮ ಪ್ರಕರಣದ ತನಿಖೆಗೆ ಒಳಗಾಗಿದ್ದ ಜೀವಾ ಆತ್ಮಹತ್ಯೆ ಪ್ರಕರಣದ ಕುರಿತು ಸಿಸಿಬಿ ಎಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

-ಬಿ.ದಯಾನಂದ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ