ಕನ್ನಡಪ್ರಭ ವಾರ್ತೆ ಆನಂದಪುರ
ಮೋದಿಜಿ ನೇತೃತ್ವದಲ್ಲಿ ಮತ್ತೊಮ್ಮೆ ದೇಶ ಕಟ್ಟುವ ಕೆಲಸವಾಗಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಅವರು ಆನಂದಪುರ ಸಮೀಪದ ಸಿದ್ದೇಶ್ವರ ಕಾಲೋನಿಗೆ ಭಾನುವಾರ ಸಂಜೆ ಭೇಟಿ ನೀಡಿ ಮಾತನಾಡಿ, ಈಗ ನಡೆಯುತ್ತಿರುವ ಚುನಾವಣೆ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿದೆ. ಮೋದಿಜಿ ನೇತೃತ್ವದಲ್ಲಿ ಮತ್ತೊಮ್ಮೆ ದೇಶ ಕಟ್ಟುವ ಕೆಲಸವಾಗಬೇಕಾಗಿದೆ. ಇದಕ್ಕೆ ಎಲ್ಲಾ ಜಾತಿ ಸಮುದಾಯದವರು ಯುವ ಜನಾಂಗ ಬಿಜೆಪಿ ಕಮಲದ ಗುರುತಿಗೆ ಮತ ನೀಡಬೇಕು ಎಂದು ಮತಯಾಚಿಸಿದರು.
ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಮುಖಂಡರು ಬಡವರನ್ನು ಸ್ವತಂತ್ರದಿಂದಲೂ ಪೂಜಿಸುತ್ತಾ ಬಂದರೆ ಹೊರತು ಅವರನ್ನು ಪ್ರೀತಿಸಲಿಲ್ಲ. ಬದಲಾಗಿ ಬಡವರಾಗಿ ಉಳಿಯುವ ಹಾಗೇ ಹೆಬ್ಬಟ್ಟು ಒತ್ತುವ ಕೆಲಸಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದೆ ಎಂದು ಆರೋಪಿಸಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಯೋಜನೆ ಅಡಿ 2.60 ಲಕ್ಷ ಜನರು ಕಿಡ್ನಿ ಹಾಗೂ ಕ್ಯಾನ್ಸರ್ ಅಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು 2018ರಿಂದ 2024ರ ವರೆಗೆ 2.80 ಕೋಟಿ ಹಣವನ್ನು ಕೇಂದ್ರ ಸರ್ಕಾರ ಆಯುಷ್ಮಾನ್ ಯೋಜನೆಗೆ ತುಂಬುವಂತ ಕೆಲಸವಾಗಿದೆ. ರಾಜ್ಯ ಸರ್ಕಾರ ಅಭಕಾರಿ ಸುಂಕ, ರಿಜಿಸ್ಟರ್ ಶುಲ್ಕ ಸೇರಿ ಇಲಾಖೆಗಳಿಗೆ ಹೆಚ್ಚಿನ ಶುಲ್ಕ ಮಾಡಿದ್ದರಿಂದ ರಾಜ್ಯದ ಜನರ ಜೇಬಿಗೆ ಬರೆ ಎಳೆದಂತಹಾಗಿದೆ. ಅವರಿಂದಲೇ ಕಸಿದುಕೊಂಡ ಹಣ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಿಂದಿರುಗಿಸುತ್ತಿದ್ದಾರೆ. ಇದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು ಎಂದರು.
ದೇಶದ ಜನಸಾಮಾನ್ಯರು ಪ್ರತಿಯೊಬ್ಬ ವ್ಯಕ್ತಿಯು ಸಂತೋಷದಿಂದ ಜೀವನ ನಡೆಸಲು ಬೇಕಾದ ಯೋಜನೆ, ಪ್ರತಿಯೊಬ್ಬರಿಗೂ ತಲಪಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಮತ್ತು ರಾಜ ತಾಂತ್ರಿಕವಾಗಿ ಭಾರತದ ವಿಶ್ವದಲ್ಲಿಯೇ ಸೂಪರ್ ಪವರ್ ಆಗಲು ಯೋಜನೆ ರೂಪಿಸಲಾಗಿದೆ. ಇಡೀ ವಿಶ್ವವೇ ಭಾರತದ 18ನೇ ಲೋಕಸಭಾ ಚುನಾವಣೆ ಸೂಕ್ಷ್ಮವಾಗಿ ವೀಕ್ಷಿಸುತ್ತಿದೆ ಎಂದರು. ಮೋದಿ ಸರ್ಕಾರ ಹಿಂದಿನ 10 ವರ್ಷಗಳಲ್ಲಿ ನಡೆದ ಆಡಳಿತವನ್ನು ಜನ ನೋಡಿದ್ದಾರೆ. 60 ವರ್ಷ ಆಳಿದ ಕಾಂಗ್ರೆಸ್ ದೇಶದ ಸ್ಥಿತಿಗತಿ ಬಗ್ಗೆ ಜನಸಾಮಾನ್ಯರು ಅರ್ಥ ಮಾಡಿಕೊಂಡಿದ್ದಾರೆ. ಭಾರತ ದೇಶದ ಉಜ್ವಲ ಭವಿಷ್ಯಕ್ಕಾಗಿ ಯುವ ಸಮೂಹ ಮತ್ತೊಮ್ಮೆ ಮೋದಿ ಗೆಲುವಿಗೆ ಶ್ರಮಿಸಬೇಕಾದ ಅವಶ್ಯಕತೆ ಇದೆ. ಮೋದಿಜಿ ನಡೆಸಿದ 10 ವರ್ಷದ ಆಡಳಿತ ಇದು ಟೈಲರ್ ಮಾತ್ರ ಪಿಚ್ಚರ್ ಇನ್ನೂ ಬಾಕಿ ಇದೆ ಎಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಮೇಲ್ ಸೇತುವೆ, ಸಿಗಂದೂರು ಕೇಬಲ್ ಸೇತುವೆ, ಶಿವಮೊಗ್ಗದಲ್ಲಿ ಕೇಂದ್ರೀಯ ಮಹಾವಿದ್ಯಾಲಯ, ಸೇರಿ ನೂರಾರು ಅಭಿವೃದ್ಧಿ ಕಾರ್ಯಗಳಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯವಾಗಬೇಕಾಗಿದೆ. ಅಲ್ಲದೆ ಮೋದಿಜಿ ಮತ್ತೆ ಪ್ರಧಾನಿಯಾಗಲು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾದ ನಿಮ್ಮ ನೆಚ್ಚಿನ ರಾಘಣ್ಣನಿಗೆ ಮತ ನೀಡಿ ಎಂದರು.ಮಾಜಿ ಸಚಿವ ಹರತಾಳು ಹಾಲಪ್ಪ, ಹಕ್ರೆ ಮಲ್ಲಿಕಾರ್ಜುನ್, ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡ್, ಡಾ. ರಾಜ ನಂದಿನಿ, ಭರ್ಮಪ್ಪ, ಸುಬ್ರಮಣ್ಯ, ಹೇಮು, ಮುರುಳಿ, ಸುಡುಗಾಡು ಸಿದ್ದ ಜನಾಂಗದ ಪ್ರಮುಖ ನಾಗರಾಜ್ ಕಾಲೋನಿ, ಮಂಜುನಾಥ್, ಶಾಂತಕುಮಾರ್, ಜಿಪಂ ಮಾಜಿ ಸದಸ್ಯ ಎ.ಟಿ ನಾಗರತ್ನ, ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಅನೇಕರು ಇದ್ದರು.