ಮುಂಬರುವ ಲೋಕಸಭಾ ಚುನಾವಣೆ ಕುಟುಂಬ ರಾಜಕಾರಣ ಮತ್ತು ಗ್ಯಾರಂಟಿ ಯೋಜನೆಗಳಿಗಿಂತ ಪ್ರಮುಖವಾಗಿ ಹಿಂದುತ್ವ ಗಟ್ಟಿಗೊಳಿಸಿ ಈ ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದೆ
ತೀರ್ಥಹಳ್ಳಿ : ಮುಂಬರುವ ಲೋಕಸಭಾ ಚುನಾವಣೆ ಕುಟುಂಬ ರಾಜಕಾರಣ ಮತ್ತು ಗ್ಯಾರಂಟಿ ಯೋಜನೆಗಳಿಗಿಂತ ಪ್ರಮುಖವಾಗಿ ಹಿಂದುತ್ವ ಗಟ್ಟಿಗೊಳಿಸಿ ಈ ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಮಂಡಲ ಬಿಜೆಪಿ ವತಿಯಿಂದ ಶನಿವಾರ ತಾಲೂಕಿನ ದರಲಗೋಡು ಗ್ರಾಮದ ಮನೆಯೊಂದರ ಆವರಣದಲ್ಲಿ ಆಯೋಜಿಸಿದ್ದ ಆರಗ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಮಹಿಳಾ ಸಮಾವೇಶದ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನ ವರ್ಷಗಳ ಕಡೆಗೆ ಮುನ್ನುಗ್ಗುತ್ತಿರುವ ಈ ಕಾಲಘಟ್ಟದಲ್ಲಿ ವಿಕಸಿತ ಭಾರತ ನಿರ್ಮಾಣದ ಮೂಲಕ ಬಡವರು, ರೈತರು ಯುವಕರ ಬದುಕಿನಲ್ಲಿ ಶಕ್ತಿ ತುಂಬುವ ಮೂಲಕ ಭವಿಷ್ಯ ಉಜ್ವಲಗೊಳಿಸುವ ಅನಿವಾರ್ಯತೆಯಿದೆ ಎಂದರು.
ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಜೆಪಿ ಜಾರಿಗೆ ತಂದಿದ್ದ ಕೃಷಿ ಸಮ್ಮಾನ್ ಮುಂತಾದ ಕಾರ್ಯಕ್ರಮಗಳನ್ನು ಗಾಳಿಗೆ ತೂರಿದೆ. ರಾಜಕೀಯವಾಗಿ ಯಾವುದೇ ಸಿದ್ಧಾಂತಗಳಿಲ್ಲದೇ ಕೇವಲ ಟೀಕೆಗಳನ್ನೇ ಅಸ್ತ್ರ ಮಾಡಿರುವ ಕಾಂಗ್ರೆಸ್ ಬಗ್ಗೆ ಜನರು ಚೀ ಥೂ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಸಾಧನೆ ಆಧಾರದಲ್ಲಿ ಈ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಜಯ ಗಳಿಸುವ ಭರವಸೆ ವ್ಯಕ್ತಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್, ಕಾರ್ಯದರ್ಶಿ ಗುರುದತ್, ತಾಲೂಕು ಜೆಡಿಎಸ್ ಮಹಿಳಾ ಅಧ್ಯಕ್ಷೆ ಶೈಲಾ ನಾಗರಾಜ್, ಚಂದ್ರಕಲಾ, ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷೆ ಮಂಜುಳಾ, ಗಾಯತ್ರಿ, ಮಂಗಳಾ ನಾಗೇಂದ್ರ, ಬೇಗುವಳ್ಳಿ ಸತೀಶ್, ತೂದೂರು ಮಧುರಾಜ ಹೆಗ್ಡೆ, ಬೇಗುವಳ್ಳಿ ಕವಿರಾಜ್, ಟಿ.ಮಂಜುನಾಥ್, ಚಂದವಳ್ಳಿ ಸೋಮಶೇಖರ್ ಮುಂತಾದವರಿದ್ದರು.
ಕೆಲವರಿಗೆ ಹುಟ್ಟುಗುಣ ಸುಟ್ಟರು ಹೋಗಲ್ಲ
ಕೆ.ಎಸ್.ಈಶ್ವರಪ್ಪನವರ ಬಂಡಾಯ, ಬಸವರಾಜ್ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಕೆಲವರಿಗೆ ಹುಟ್ಟುಗುಣ ಸುಟ್ಟರೂ ಹೋಗಲ್ಲ. ಹೈಕಮಾಂಡ್ ಇವರ ಕಿವಿ ಹಿಂಡುವ ಕೆಲಸ ಮಾಡಿದ್ದರೂ ಇವರ ಬದಲಾಗಿಲ್ಲ. ಸಂದರ್ಭ ನೋಡಿ ಉತ್ತರ ಕೊಡ್ತೀವಿ ಮತ್ತು ಹಿಂದುತ್ವದ ಪಾಠ ಇವರಿಂದ ಕಲಿಯುವ ಅಗತ್ಯ ನಮ್ಮ ಕುಟುಂಬಕ್ಕಿಲ್ಲಾ. ಈ ಚುನಾವಣೆಯಲ್ಲಿ ಅಭಿವೃದ್ಧಿ ಪರ ಮತ್ತು ವಿರೋಧಿ ಎರಡೇ ವಿಚಾರಗಳು ಪ್ರಮುಖವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.