ಧಾರವಾಡ ಜಂಬೂ ಸವಾರಿ ಭಾರೀ ಅದ್ಧೂರಿ!

KannadaprabhaNewsNetwork |  
Published : Oct 03, 2025, 01:07 AM IST
2ಡಿಡಬ್ಲೂಡಿ9ಧಾರವಾಡದ ಜಂಬೂ ಸವಾರಿ ಉತ್ಸವಕ್ಕೆ ಗಾಂಧಿನಗರ ಈಶ್ವರ ದೇವಸ್ಥಾನದಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಮೈಸೂರು ದಸರಾಗೆ ಎಷ್ಟು ಅನುದಾನ ಕೊಡುತ್ತಾರೆಯೋ ಅದರ ಅರ್ಧ ಅನುದಾನದವನ್ನು ಧಾರವಾಡ ದಸರಾಗೆ ಕೊಡುವಂತಾದರೆ ಮಾತ್ರ ಪ್ರಾದೇಶಿಕ ಸಂಸ್ಕೃತಿ ಉಳಿಯಲು ಸಾಧ್ಯ.

ಧಾರವಾಡ:

ಕಳೆದ ಎರಡು ದಶಕಗಳಿಂದ ದಸರಾ ಹಬ್ಬದ ನಿಮಿತ್ತ ನಡೆಯುತ್ತಿರುವ ಮೈಸೂರು ಮಾದರಿಯ ಧಾರವಾಡ ಜಂಬೂ ಸವಾರಿ ಉತ್ಸವ ಬುಧವಾರ ಅದ್ಧೂರಿಯಿಂದ ಜರುಗಿತು. ಎರಡು ಆನೆಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದವು.

ಗಾಂಧಿನಗರದ ಈಶ್ವರ ದೇವಸ್ಥಾನದಿಂದ ಬಂಡೆಮ್ಮ ದೇವಿ ಮೂರ್ತಿ ಇದ್ದ ಅಂಬಾರಿ ಹೊತ್ತ ಆನೆಯ ಮೆರವಣಿಗೆ ಶುರುವಾಯಿತು. ಈ ಜಂಬೂ ಸವಾರಿ ಉತ್ಸವಕ್ಕೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಸಂಸದ ಜಗದೀಶ ಶೆಟ್ಟರ್, ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಸೇರಿ ಅನೇಕ ಮಠಾಧೀಶರು, ಗಣ್ಯರು ಪುಷ್ಪ ಹಾಕುವ ಮೂಲಕ ಚಾಲನೆ ನೀಡಿದರು.

ಅಲ್ಲಿಂದ ಆರಂಭವಾದ ಜಂಬೂ ಸವಾರಿ ಮೆರವಣಿಗೆ ವಿದ್ಯಾಗಿರಿ, ಹೊಸ ಯಲ್ಲಾಪುರ, ಗಾಂಧಿಚೌಕ್, ಸುಭಾಷ ರಸ್ತೆ ಮೂಲಕ ಕಲಾಭವನದ ವರೆಗೂ ಸಾಗಿತು. ಈ ಉತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ದಿಂಡಿ ಮೇಳ, ಸಾರೋಟ, ಕುದುರೆ, ಪುರವಂತರ ಮೇಳ, ಬೊಂಬೆ ಕುಣಿತ ಸೇರಿ 50ಕ್ಕೂ ಅಧಿಕ ಕಲಾ ಮೇಳದವರು ಪಾಲ್ಗೊಂಡಿದ್ದರು. ಈ ಉತ್ಸವ ಹಾಗೂ ಮೆರವಣಿಗೆಯನ್ನು ಧಾರವಾಡದ ಜನ ಎರಡು ಬದಿಯಿಂದ ನಿಂತು ಕಣ್ತುಂಬಿಕೊಂಡರು. ಮುಸ್ಲಿಂ ಯುವ ಸಂಘದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾವಿದರಿಗೆ ಶರಬತ್ ವಿತರಿಸಲಾಯಿತು..

ಮೆರವಣಿಗೆ ಉದ್ಘಾಟನೆ ವೇಳೆ ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಮೈಸೂರು ದಸರಾಗೆ ಎಷ್ಟು ಅನುದಾನ ಕೊಡುತ್ತಾರೆಯೋ ಅದರ ಅರ್ಧ ಅನುದಾನದವನ್ನು ಧಾರವಾಡ ದಸರಾಗೆ ಕೊಡುವಂತಾದರೆ ಮಾತ್ರ ಪ್ರಾದೇಶಿಕ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ಉತ್ಸವಕ್ಕೆ ಚಾಲನೆ ನೀಡಿದ ಸಂಸದ ಜಗದೀಶ ಶೆಟ್ಟರ್‌, ನಾಡು-ನುಡಿ ಸಂಸ್ಕೃತಿ ಉಳಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ಮೈಸೂರು ಮಾದರಿಯಲ್ಲಿ ದಸರಾ ಉತ್ಸವ ನಡೆಯಬೇಕು. ಜೊತೆಗೆ ರಾಜ್ಯ ಸರ್ಕಾರ ಈ ಉತ್ಸವಕ್ಕೆ ತಕ್ಕ ಅನುದಾನ ನೀಡಬೇಕೆಂದರು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿ, 2004ರಿಂದ ಸಮಿತಿಯಿಂದ ಕೋವಿಡ್‌ ಹೊರತುಪಡಿಸಿ ಎಲ್ಲ ವರ್ಷಗಳಲ್ಲಿ ಮಾಡಲಾಗಿದೆ. ನವರಾತ್ರಿಯ ಮೊದಲ ದಿನದಿಂದ ಕೊನೆ ದಿನ ವರೆಗೂ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆ, ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಕೊನೆ ದಿನ ಮೆರವಣಿಗೆ ಅದ್ಧೂರಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಸಮಿತಿ ಪದಾಧಿಕಾರಿಗಳಾದ ನಾರಾಯಣ ಘೋರ್ಪಡೆ, ಮಂಜುಗೌಡ ಪಾಟೀಲ, ಪಿ.ಎಚ್.ಕಿರೇಸೂರು, ವಿಲಾಸ ತಿಬೇಲಿ, ಯಶವಂತರಾವ್‌ ಕದಂ, ಹನಮೇಶ ಸರಾಫ್, ಮನೋಜ ಸಂಗೊಳ್ಳಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ