ಇದು ಜನರ ಅಳಿವು ಉಳಿವಿನ ಚುನಾವಣೆ: ಶಿವಸಾಗರ್ ತೇಜಸ್ವಿ

KannadaprabhaNewsNetwork | Published : Apr 25, 2024 1:07 AM

ಸಾರಾಂಶ

ಇದು ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಉಳಿವು, ನ್ಯಾಯ, ನೀತಿ, ಸಮಾನತೆ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಶಿವಸಾಗರ್ ತೇಜಸ್ವಿ ಹೇಳಿದರು.

ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಇದು ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಉಳಿವು, ನ್ಯಾಯ, ನೀತಿ, ಸಮಾನತೆ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಶಿವಸಾಗರ್ ತೇಜಸ್ವಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರದ ಮೋದಿ ಸರ್ಕಾರ ಯಾವುದೇ ಜನಪರ ಯೋಜನೆ ರೂಪಿಸದೇ ಚುನಾವಣೆ ಪ್ರಚಾರದಲ್ಲಿ ಜಾತಿ, ಧರ್ಮಗಳ ವಿಷಯ ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ. ಇನ್ನೂ ಜನರನ್ನು ಮುರ್ಖರನ್ನಾಗಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದರು.

ಜಿಲ್ಲಾ ವಕ್ತಾರ ಎಂ.ಎಸ್.ಅನಂತ್ ಮಾತನಾಡಿ, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಿಂದೆ ನೀಡಿದ ಭರವಸೆ ಎಷ್ಟು ಈಡೇರಿಸಲಾಗಿದೆ ಹಾಗೂ ಮುಂದೆ ಮಾಡುವ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಬೇಕಾಗುತ್ತದೆ. ಆದರೆ ಬಿಜೆಪಿಯವರು ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆ ಒಂದನ್ನೂ ಈಡೇರಿಸಿಲ್ಲ. ಜನರ ಬಳಿ ತೆರಳಿ ಮತ ಕೇಳಲು ಮುಖವಿಲ್ಲದೇ ಈಗ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಜನರಿಗೆ ಭಾವನೆಗಿಂತ ಬದುಕು ಮುಖ್ಯವೆಂಬುದು ಅರ್ಥವಾಗಿದೆ. 10 ವರ್ಷ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಶೂನ್ಯ ಸಾಧನೆಯಿಂದ ಸ್ವಪಕ್ಷದವರೇ ಅವರಿಗೆ ಗೋ ಬ್ಯಾಕ್ ಅಭಿಯಾನ ನಡೆಸಿ ಓಡಿಸಿ ಹೊಸ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಇದರ ಮರ್ಮವೇನೆಂಬುದು ಅರಿಯದಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೇವಲ 20 ತಿಂಗಳು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ರಾಜ್ಯ ಸರ್ಕಾರ 5 ಭರವಸೆ ಈಡೇರಿಸಿದ್ದರಿಂದ ಜನರ ಮುಂದೆ ಮತ ಕೇಳಲು ಯಾವುದೇ ಸಂಕೋಚವಿಲ್ಲವೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಳೆ ಮೂಡಿಗೆರೆ ಗ್ರಾಪಂ ಸದಸ್ಯ ಚಂದ್ರೇಶ್, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ.ಶಂಕರ್, ಎಸ್ಟಿ ಘಟಕದ ಅಧ್ಯಕ್ಷ ಹರೀಶ್, ನಗರಾಧ್ಯಕ್ಷ ಸುರೇಶ್, ಪ್ರವೀಣ್ ಕೃಷ್ಣಾಪುರ ಉಪಸ್ಥಿತರಿದ್ದರು.

Share this article