ಅಪಾಯಕಾರಿ ಮುಖ್ಯರಸ್ತೆ, ಎಚ್ಚರ ತಪ್ಪಿದರೆ ಅವಘಡ

KannadaprabhaNewsNetwork | Published : Feb 22, 2024 1:48 AM

ಸಾರಾಂಶ

ಮಳವಳ್ಳಿ ಶಿವಸಮುದ್ರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾಕಷ್ಟು ವಾಹನಗಳು ಬೆಳಕವಾಡಿ ಕಾವೇರಿಪುರ ನೂತನ ಸೇತುವೆ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚಾರ ನಡೆಸುತ್ತಿವೆ. ಇದಲ್ಲದೆ ಶಿವನಸಮುದ್ರ ಬೆಳಕವಾಡಿ ಕಾವೇರಿಪುರ ಮಾರ್ಗವಾಗಿ ತಲಕಾಡಿನ ಕಡೆಗೂ ಕೂಡ ಪ್ರವಾಸಿ ವಾಹನಗಳ ಸಂಚಾರ ಹೆಚ್ಚಾಗಿದೆ.

ಕಾವೇರಿಪುರ ಗ್ರಾಮದೊಳಗಡೆ ಅಪಾಯಕಾರಿ ಜಡ್ ಆಕಾರದ ಕಿರಿದಾದ ರಸ್ತೆ ತಿರುವಿದ್ದು, ಅವಘಡಕ್ಕೆ ಅಹ್ವಾನ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ತಲಕಾಡು

ಕಾವೇರಿಪುರದ ಗ್ರಾಮದೊಳಗಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ಅಪಾಯಕಾರಿ ಮುಖ್ಯರಸ್ತೆ ತಿರುವಿದ್ದು, ವಾಹನ ಸವಾರರು ಎಚ್ಚರ ತಪ್ಪಿದರೆ ಅವಘಡಕ್ಕೆ ಅಹ್ವಾನಿಸುವ ಆತಂಕದಲ್ಲೇ ಸಂಚಾರ ನಡೆಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಅಪಾಯಕಾರಿ ತಿರುವು ಕಂಡರೂ ಕಾಣದಂತೆ ನಿರ್ಲಕ್ಷ್ಯವಹಿಸಿದ್ದಾರೆ. ಇಲ್ಲಿನ ಕಾವೇರಿಪುರ ಗ್ರಾಮದ ನದಿಗೆ ನೂತನವಾಗಿ ಸಂಪರ್ಕ ಸೇತುವೆ ನಿರ್ಮಾಣದ ಬಳಿಕ, ಕೊಳ್ಳೇಗಾಲ ಕಡೆಯಿಂದ ತಲಕಾಡು ಕಡೆಗೆ ಬಂದು ಹೋಗುವ ಲಘು ವಾಹನಗಳ ದಟ್ಟಣೆ ಹೆಚ್ಚಿದೆ.

ಮಳವಳ್ಳಿ ಶಿವಸಮುದ್ರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾಕಷ್ಟು ವಾಹನಗಳು ಬೆಳಕವಾಡಿ ಕಾವೇರಿಪುರ ನೂತನ ಸೇತುವೆ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚಾರ ನಡೆಸುತ್ತಿವೆ. ಇದಲ್ಲದೆ ಶಿವನಸಮುದ್ರ ಬೆಳಕವಾಡಿ ಕಾವೇರಿಪುರ ಮಾರ್ಗವಾಗಿ ತಲಕಾಡಿನ ಕಡೆಗೂ ಕೂಡ ಪ್ರವಾಸಿ ವಾಹನಗಳ ಸಂಚಾರ ಹೆಚ್ಚಾಗಿದೆ.

ಬಸ್ಸು, ಲಾರಿ ಸೇರಿದಂತೆ ಭಾರಿ ವಾಹನಗಳು ಕಾವೇರಿಪುರ ಗ್ರಾಮದೊಳಗಡೆ ಜಡ್ ಆಕಾರದಲ್ಲಿರುವ ಕಿರಿದಾದ ರಸ್ತೆಯಲ್ಲಿ ಸಂಚಾರಕ್ಕೆ ನಿತ್ಯ ಹರಸಾಹಸಪಡುತ್ತಿವೆ. ತಲಕಾಡು ಮಾರ್ಗ ಕಾವೇರಿಪುರ ಗ್ರಾಮದ ಹೊರಭಾಗದಿಂದ ಕೊಳ್ಳೇಗಾಲ ನದಿ ಸೇತುವೆ ರಸ್ತೆ ಸಂಪರ್ಕಿಸಲು, ನೂತನ ಬೈಪಾಸ್ ರಸ್ತೆ ನಿರ್ಮಿಸುವಂತೆ ಇದೇ ರಸ್ತೆಯಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇದೇ ಸೇತುವೆಯ ದಕ್ಷಿಣ ದಿಕ್ಕಲ್ಲಿ ಕೊಳ್ಳೇಗಾಲ ಕೇಂದ್ರ ಅಥವಾ ಮಾಂಬಳ್ಳಿ ಅಗರ ಮಾರ್ಗವಾಗಿ ಯಳಂದೂರು ತಾಲೂಕು ಚಾಮರಾಜನಗರ ಜಿಲ್ಲಾ ಕೇಂದ್ರ ಸಂಪರ್ಕಿಸಲು. ದೊಡ್ಡಿಂದವಾಡಿ ಹನೂರು ಮಾರ್ಗವಾಗಿ ಮಲೈಮಹದೇಶ್ವರ ಬೆಟ್ಟ ಸಂಪರ್ಕಿಸಲು ಕೊಳ್ಳೇಗಾಲ ಟೌನ್ ಹೊರಭಾಗದ ದಾಸನಪುರ ಗ್ರಾಮದ ಸಮೀಪ ಸರ್ಕಾರ ನೂತನ ಹೊರವರ್ತುಲ ರಸ್ತೆ ನಿರ್ಮಿಸಿದೆ.

ಆದರೆ ಸೇತುವೆ ಉತ್ತರ ದಿಕ್ಕಿನ ಕಾವೇರಿಪುರ ಗ್ರಾಮದ ಬಳಿ ನೂತನ ಹೊರವರ್ತುಲ ರಸ್ತೆ ನಿರ್ಮಿಸಲು ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನೂತನ ಸೇತುವೆ ನಿರ್ಮಿಸಿದರು ಕಾವೇರಿಪುರ ಗ್ರಾಮಕ್ಕೆ ಬೈಪಾಸ್ ರಸ್ತೆ ನಿರ್ಮಿಸದೆ ಭಾರಿ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿನ ಮುಖ್ಯ ಎರಡು ತಿರುವಿನಲ್ಲಿ ತಕ್ಷಣ ಎದುರಾಗುವ ವಾಹನ ಗುದ್ದ ಬಹುದೆಂಬ ಆತಂಕದಲ್ಲೇ ವಾಹನ ಸವಾರರು ಕಿರಿದಾದ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ.

ಕಾವೇರಿಪುರ ಗ್ರಾಮದಿಂದ ಸ್ಟೀಮರ್ ಬೋಟ್ ಮೂಲಕ ನದಿ ದಾಟಿ ಕೊಳ್ಳೇಗಾಲ ಸಂಪರ್ಕಿಸುತ್ತಿದ್ದ ಹೋಬಳಿ ಪ್ರಯಾಣಿಕರಿಗೆ, ನೂತನ ಸೇತುವೆ ಕೊಡುಗೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ಇದೇ ಗ್ರಾಮದ ಸುತ್ತ ನೂತನ ಹೊರ ವರ್ತುಲ ರಸ್ತೆ ನಿರ್ಮಿಸಿ ಹೆಚ್ಚಿನ ಅನುಕೂಲ ಮಾಡಿಕೊಡುವಂತೆ ಇದೇ ರಸ್ತೆಯಲ್ಲಿ ದೈನಂದಿನ ಸಂಚಾರ ನಡೆಸುವ ಪ್ರಯಾಣಿಕರು ಮನವಿ ಮಾಡಿದ್ದಾರೆ.

Share this article