ಮದ್ಯ ವ್ಯಸನಗಳಿಂದ ಮುಕ್ತರು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ: ಕಣಿವೆ ವಿನಯ್ ಸಲಹೆ

KannadaprabhaNewsNetwork |  
Published : Nov 06, 2025, 02:00 AM IST
 ನರಸಿಂಹರಾಜಪುರ ಮಹಾ ವೀರಭವನದಲ್ಲಿ  ನಡೆದ  2000 ನೇ ಮದ್ಯ ವರ್ಜನ ಶಿಬಿರದ 5 ನೇ ದಿನದ ಮಾಹಿತಿ, ಮಾರ್ಗದರ್ಶನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವತಿಯಿಂದ ಧ.ಗ್ರಾ.ಯೋಜನಾಧಿಕಾರಿ ರಾಜೇಶ್ ಅವರಿಗೆ ನೆನಪಿನ ಕಾಣಿಕೆ ನೀಡಿದರು.   | Kannada Prabha

ಸಾರಾಂಶ

ನರಸಿಂಹರಾಜಪುರಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಮುಂದೆ ನಿಮಗೆ ಇಷ್ಟವಾದ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಸಲಹೆ ನೀಡಿದರು.

- 2000 ನೇ ಮದ್ಯ ವರ್ಜನ ಶಿಬಿರದ 5 ನೇ ದಿನದ ಮಾಹಿತಿ, ಮಾರ್ಗದರ್ಶನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಮುಂದೆ ನಿಮಗೆ ಇಷ್ಟವಾದ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಸಲಹೆ ನೀಡಿದರು.

ಸೋಮವಾರ ಮಹಾವೀರ ಭವನದಲ್ಲಿ ಧ.ಗ್ರಾ.ಯೋಜನೆ ಹಮ್ಮಿಕೊಂಡಿರುವ 2000ನೇ ಮದ್ಯ ವರ್ಜನ ಶಿಬಿರದ 5 ನೇ ದಿನದ ಮಾಹಿತಿ, ಮಾರ್ಗದರ್ಶನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವರು ಸಂತೋಷಕ್ಕೆ , ಕೆಲವರು ದುಖಃ ಬಂದಾಗ ಕುಡಿತ ಶುರು ಮಾಡುತ್ತಾರೆ. ಮುಂದೆ ಅದು ಚಟವಾಗಿ ಪರಿಣಮಿಸಿ ತಮ್ಮ ಕುಟುಂಬ , ಸಮಾಜವನ್ನು ಹಾಳು ಮಾಡುತ್ತಾರೆ ಎಂದರು.

ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಧ.ಗ್ರಾ.ಯೋಜನೆಯವರು ಇಡೀ ಸಮಾಜವನ್ನು ಸಂಸ್ಕಾರಯುತವಾಗಿ ಬೆಳೆಸುತ್ತಿದ್ದಾರೆ. ದ್ವಾಪರ ಯುಗದಲ್ಲೂ ಅಧರ್ಮ ಹೆಚ್ಚಾದಾಗ ಧರ್ಮದ ರಕ್ಷಣೆಗಾಗಿ ಶ್ರೀ ಕೃಷ್ಣ ಪರಮಾತ್ಮ ಪ್ರತ್ಯಕ್ಷನಾಗುತ್ತಿದ್ದ. ಕಲಿಯುಗ ದಲ್ಲಿ ಧರ್ಮದ ರಕ್ಷಣೆಗೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೇವರ ರೂಪದಲ್ಲಿ ಬಂದಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ 2000 ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಜಾತಿ, ಧರ್ಮ, ರಾಜಕೀಯ ಬೇಧ ಭಾವವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದಾರೆ. 7 ದಿನಗಳ ಮದ್ಯ ವರ್ಜನ ಶಿಬಿರದಲ್ಲಿ 44 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಗುರುವಾರ ಎಲ್ಲಾ ಶಿಬಿರಾರ್ಥಿಗಳನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದು ಅಲ್ಲಿನ ಅಮೃತ ವರ್ಷಿಣಿ ಸಭಾಂಗಣದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಶಿಬಿರಾಧಿಕಾರಿ ವಿದ್ಯಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಪ್ರಶಾಂತಶೆಟ್ಟಿ, ಎನ್.ಎಂ.ಕಾಂತರಾಜ್, ಮುಖಂಡರಾದ ಅರುಣಕುಮಾರ್, ಆಶೀಶ್ ಕುಮಾರ್, ರಶ್ಮಿ ದಯಾನಂದ್, ಎಂ.ಎನ್.ನಾಗೇಶ್, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಶಿಕ್ಷಕ ಗುಣಪಾಲ್ ಜೈನ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ವಿಪತ್ತು ನಿರ್ವಹಣಾ ಘಟಕದ ದೇವೇಂದ್ರ, ಧ.ಗ್ರಾ.ಯೋಜನೆ ಕೊಪ್ಪ ತಾ. ಯೋಜನಾಧಿಕಾರಿ ರಾಜೇಶ್ ಇದ್ದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಂದ ಧ.ಗ್ರಾ.ಯೋಜನೆಯವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ತೀರ್ಥೇಶ್ ಸ್ವಾಗತಿಸಿದರು.ರುದ್ರೇಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ