ದಸರಾ ಗೊತ್ತಿಲ್ಲದವರು ಬಾನು ಮುಷ್ತಾಕ್ ವಿರೋಧಿಸಿದ್ದರು : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Sep 23, 2025, 01:03 AM IST
13 | Kannada Prabha

ಸಾರಾಂಶ

‘ಬನ್ನಿ, ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳಿಗೆ ಟಾಂಗ್‌ ನೀಡಿದ್ದಾರೆ.

 ಮೈಸೂರು :  ‘ಬನ್ನಿ, ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಗಳಿಗೆ ಟಾಂಗ್‌ ನೀಡಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಸೋಮವಾರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟಕರಾಗಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿದ ನಂತರದ ಬೆಳವಣಿಗೆಗಳಿಂದ ಬೇಸತ್ತಿದ್ದ ಸಿದ್ದರಾಮಯ್ಯ, ಚುನಾವಣೆಯಲ್ಲಿ ರಾಜಕಾರಣ ಮಾಡೋಣ, ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎನ್ನುತ್ತಲೇ ಘೋಡಾ ಹೈ ಮೈದಾನ್‌ ಹೈ ಬನ್ನಿ ಎಂದು ವಿರೋಧಿಗಳಿಗೆ ಪಂಥಾಹ್ವಾನ ನೀಡಿದರು.

ದಸರಾ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರನ್ನು ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಳಮಟ್ಟದ ರಾಜಕಾರಣ ಮಾಡುವುದು ಅಕ್ಷಮ್ಯ ಎಂದರು.

ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ. ಬಾನು ಮುಷ್ತಾಕ್ ಅವರು ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು. ಕನ್ನಡದ ಸಾಹಿತಿ. ನಾವು ಮನುಷ್ಯರು, ಪರಸ್ಪರ ಪ್ರೀತಿಯಿಂದ ಬಾಳಬೇಕು. ದ್ವೇಷ, ಮನುಷ್ಯತ್ವದ ವಿರೋಧಿ. ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು ಎಂದರು.

ಸಂವಿಧಾನದ ಮೌಲ್ಯಗಳಾದ ಸಹಿಷ್ಣುತೆ-ಸಹಬಾಳ್ವೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು. ನಮ್ಮ ಸಂವಿಧಾನ ಜಾತ್ಯತೀತ ಮತ್ತು ಧರ್ಮಾತೀತ. ಇದನ್ನೇ ಹೈಕೋರ್ಟ್-ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಯಾರಿಗೆ ಭಾರತೀಯರು ಎನ್ನುವ ಹೆಮ್ಮೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ. ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ಗೊತ್ತಿರಬೇಕು ಎಂದರು.

ರಾಷ್ಟ್ರಕವಿ ಕುವೆಂಪು ಅವರ ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ ಎಂಬ ಮಾತುಗಳನ್ನು ಮರೆಯಬಾರದು. ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರಾಜ್ಯವನ್ನು ಗಟ್ಟಿಗೊಳಿಸಬೇಕು ಎಂದು ಅವರು ಕರೆ ನೀಡಿದರು.ಗ್ಯಾರಂಟಿ ನಿಲ್ಲಲ್ಲ:

ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಮತ್ತು ಎಲ್ಲಾ ಪಕ್ಷದ ಬಡವರಿಗೆ ನಾವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಗ್ಯಾರಂಟಿಗಳು ನಿಲ್ಲುವುದಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ರಾಜ್ಯದ ಜನರ ತಲಾ ಆದಾಯ ದೇಶದಲ್ಲೇ ನಂಬರ್ ಒನ್ ಆಗಿದೆ. ಈಗ ಜಿಡಿಪಿಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ ಎಂದು ಹೇಳಿದರು. ಒಂದು ಕಡೆ ನಮ್ಮ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿಯವರೇ ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದಿದ್ದಾರೆ ಎಂದು ಕುಟುಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!