ಸ್ಥಿತಿವಂತರು ತಾವಿರುವ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಔಷಧಿಗಳಾಗಲಿ, ಇತರೇ ಅವಶ್ಯಕ ವೈದ್ಯಕೀಯ ಚಿಕಿತ್ಸಾ ತಪಾಸಣಾ ಉಪಕರಣಗಳು ಮೂಲಭೂತ ಸೌಲಭ್ಯಗಳನ್ನು ದೇಣಿಗೆಯಾಗಿ ನೀಡಲು ಸ್ವಯಂ ಪ್ರೇರಣೆಯಿಂದ ಮುಂದೇ ಬರಬೇಕು.
ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಮನವಿ
ಕನ್ನಡಪ್ರಭ ವಾರ್ತೆ ಹಳಿಯಾಳ
ಸ್ಥಿತಿವಂತರು ತಾವಿರುವ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಔಷಧಿಗಳಾಗಲಿ, ಇತರೇ ಅವಶ್ಯಕ ವೈದ್ಯಕೀಯ ಚಿಕಿತ್ಸಾ ತಪಾಸಣಾ ಉಪಕರಣಗಳು ಮೂಲಭೂತ ಸೌಲಭ್ಯಗಳನ್ನು ದೇಣಿಗೆಯಾಗಿ ನೀಡಲು ಸ್ವಯಂ ಪ್ರೇರಣೆಯಿಂದ ಮುಂದೇ ಬರಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.
ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಣ್ಯದ ಕೆಲಸ:
ಸರ್ಕಾರ ಯಾವತ್ತೂ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದರೂ, ಆಸ್ಪತ್ರೆಗಳಲ್ಲಿ ಔಷಧಿಯ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ ಉದ್ಭವಿಸುತ್ತವೆ. ಅದಕ್ಕಾಗಿ ಪ್ರತಿಯೊಬ್ಬ ಸ್ಥಿತಿವಂತರು, ಉದಾರ ಮನಸ್ಸಿನವರು ಆಸ್ಪತ್ರೆಗಳಿಗೆ ದಾನ, ದೇಣಿಗೆ ನೀಡಲು ಮುಂದೇ ಬರಬೇಕು. ನೀವು ನೀಡಿದ ದೇಣಿಗೆಯು ಪುಣ್ಯದ ಕಾರ್ಯಕ್ಕೆ ಬಳಸಲ್ಪಡುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಈ ದಿಸೆಯಲ್ಲಿ ದೇಣಿಗೆಯನ್ನು ನೀಡುವ ಕಾರ್ಯಕ್ಕೆ ಚಾಲನೆಯಾಗಿ ಹಳಿಯಾಳ ಆಸ್ಪತ್ರೆಗೆ ಅವಶ್ಯಕವಾಗಿರುವ ಅಂದಾಜು ಒಂದು ಲಕ್ಷ ಮೌಲ್ಯದ ಔಷಧಿಗಳನ್ನು ತಾವು ದೇಣಿಗೆಯಾಗಿ ನೀಡುವುದಾಗಿ ದೇಶಪಾಂಡೆ ಘೋಷಿಸಿದರು.
ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಮೊದಲ ಆದ್ಯತೆ ನೀಡಿ ತಪಾಸಣೆ ಮಾಡಬೇಕು. ದಾಖಲಾತಿ ಚೀಟಿ ನೀಡುವಾಗ ಅವರನ್ನು ಸರದಿಯಲ್ಲಿ ನಿಲ್ಲಿಸಿ ಕಾಯಿಸಬಾರದೆಂದು ತಾಕೀತು ಮಾಡಿದರು. ಚಿಕಿತ್ಸೆಗೆಂದು ಬರುವವರ ತಪಾಸಣೆಯಲ್ಲಿ, ಆರೈಕೆಯಲ್ಲಿ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು, ಅವರೊಂದಿಗೆ ಚೆನ್ನಾಗಿ ಮಾತನಾಡಿರಿ ಎಂದು ವೈದ್ಯರಿಗೆ ಸೂಚಿಸಿದರು.
ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳ ಕೊರತೆ ನೀಗಿಸಲು ಗೃಹರಕ್ಷಕ ದಳದವರನ್ನು ನೇಮಿಸಿಕೊಳ್ಳಬೇಕೆಂದು ಎಂದು ಸೂಚಿಸಿದರು.
ಸಿಬ್ಬಂದಿ ಕೊರತೆ:
ತಾಲೂಕ ಆಸ್ಪತ್ರೆಯಲ್ಲಿ 14 ವೈದ್ಯರ ಹುದ್ದೆಗಳಿದ್ದು, ಅದರಲ್ಲಿ 5 ವೈದ್ಯರು, ಇದರಲ್ಲಿ 2 ವೈದ್ಯರು ಎನ್.ಆರ್.ಎಚ್.ಎಂ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಾತ್ರ ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಗೆ ಮಹಿಳಾ ವೈದ್ಯರ ಅವಶ್ಯಕತೆಯಿದೆ ಎಂದು ತಾಲೂಕಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ ಹಲಗತ್ತಿ ಸಭೆಗೆ ತಿಳಿಸಿದರು.
ವೈದ್ಯರು ಹಾಗೂ ಸಿಬ್ಬಂದಿ ಕೊರತೆಯ ಮಧ್ಯೆಯೂ ತಾಲೂಕಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿ ಗುಣಮುಖರಾದವರ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಿದೆ ಎಂದು ಪ್ರಗತಿ ವರದಿ ಮಂಡಿಸಿದರು. ಹೃದಯ ಕಾಯಿಲೆಗೆ ದಾಖಲಾಗುವವರಿಗೆ ಇಸಿಜಿ ಸೇರಿದಂತೆ ಇತರ ಚಿಕಿತ್ಸಾ ಸೌಲಭ್ಯ ನೀಡುವುದರ ಜೊತೆಯಲ್ಲಿ ಬೆಂಗಳೂರಿನ ತಜ್ಞ ವೈದ್ಯರ ಸಲಹೆಯಂತೆ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಅನಿಲಕುಮಾರ ನಾಯ್ಕ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ನಸರುಲ್ಲಾಖಾನ್ ಜೈಲರ್, ಅಪ್ಪಾಸಾಹೇಬ ಹುಂಡೇಕರ, ರವಿ ವಡ್ಡರ, ದೀಪಾ ತಿಗಡಿಕರ, ಗುರುಪಾದಪ್ಪ ಶಿವನಪ್ಪ ರವಾಟೆ, ಕರಿಯಪ್ಪ ಕೃಷ್ಣಪ್ಪ ವಾಲ್ಮೀಕಿ ಹಾಗೂ ಮಕ್ಕಳ ತಜ್ಞ ಡಾ. ಶ್ರೀಶೈಲ್ ಮಾದಣ್ಣನವರ, ಹೆಸ್ಕಾಂ, ಪೊಲೀಸ್, ಲೋಕೋಪಯೋಗಿ, ಜಿಪಂ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.