ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಸಿಕ್ಕಿದ್ದು ಬರೀ ₹1.20 ಲಕ್ಷ!

KannadaprabhaNewsNetwork |  
Published : Aug 13, 2024, 12:50 AM IST
ಉಳುವರೆಯಲ್ಲಿ ನದಿಯ ಅಬ್ಬರಕ್ಕೆ ಧ್ವಂಸಗೊಂಡ ಮನೆಗಳು. | Kannada Prabha

ಸಾರಾಂಶ

ಗುಡ್ಡ ದುರಂತದಿಂದ ಪೂರ್ತಿ ಕುಸಿದ ಉಳುವರೆ ಗ್ರಾಮದ 5 ಮನೆಗಳಿಗೆ ತಲಾ ₹1.20 ಲಕ್ಷಗಳಂತೆ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗಿದೆ.

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಉಳುವರೆ ಗ್ರಾಮದಲ್ಲಿ ಪೂರ್ತಿ ಬಿದ್ದುಹೋದ ಮನೆಗಳಿಗೆ ತಲಾ ₹1.20 ಲಕ್ಷಗಳಂತೆ ಪರಿಹಾರ ನೀಡಿದ್ದು, ಸರ್ಕಾರದ ವಸತಿ ಯೋಜನೆಯಲ್ಲಿ ಅವರ ಹೆಸರನ್ನು ಸೇರ್ಪಡೆ ಮಾಡಿ ಆ ನಿಯಮಾವಳಿ ಪ್ರಕಾರ ಪರಿಹಾರ ಸಿಗಲಿದೆ ಎಂದು ಸಂತ್ರಸ್ತರಿಗೆ ತಿಳಿಸಲಾಗಿದೆ. ಆದರೆ ಈ ಹಣದಲ್ಲಿ ಮನೆ ನಿರ್ಮಾಣ ಕಷ್ಟಕರವಾಗಿದ್ದು, ಕನಿಷ್ಠ ₹10 ಲಕ್ಷ ನೀಡಬೇಕೆಂದು ಆಗ್ರಹ ಕೇಳಿಬರುತ್ತಿದೆ.

ಗುಡ್ಡ ದುರಂತದಿಂದ ಪೂರ್ತಿ ಕುಸಿದ ಉಳುವರೆ ಗ್ರಾಮದ 5 ಮನೆಗಳಿಗೆ ತಲಾ ₹1.20 ಲಕ್ಷಗಳಂತೆ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗಿದೆ. ಇನ್ನು ಮನೆ ಕುಸಿತವಾದವರ ಹೆಸರನ್ನು ದೇವರಾಜ ಅರಸು ವಸತಿ ಯೋಜನೆಯಲ್ಲಿ ಸೇರ್ಪಡೆ ಮಾಡಿ ಅವರಿಗೆ ಮನೆ ಮಂಜೂರು ಮಾಡುವ ಭರವಸೆ ನೀಡಲಾಗಿದೆ.

ಆದರೆ ಸಂತ್ರಸ್ತರು ಹಾಗೂ ವಿವಿಧ ಸಂಘ- ಸಂಸ್ಥೆಗಳು ಮನೆ ಪೂರ್ತಿ ಬಿದ್ದವರಿಗೆ ಕನಿಷ್ಠ ₹10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮನೆ ಪೂರ್ತಿ ಬಿದ್ದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನುದಾನ ₹5 ಲಕ್ಷ ಹಾಗೂ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹5 ಲಕ್ಷ ಘೋಷಿಸಿತ್ತು. ಇದರಿಂದ ₹10 ಲಕ್ಷ ಸಿಗುತ್ತಿತ್ತು. ಈಗ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹಣ ನೀಡದೆ ಇರುವುದರಿಂದ ಮನೆ ಕಳೆದುಕೊಂಡವರಿಗೆ ₹5 ಲಕ್ಷಗಳಿಗಿಂತ ಕಡಿಮೆ ಪರಿಹಾರ ಸಿಗಲಿದೆ. ಅಂದರೆ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ ₹1.20 ಲಕ್ಷ ಹಾಗೂ ಪರಿಶಿಷ್ಟ ವರ್ಗ, ಪಂಗಡದವರಿಗೆ ₹1.50 ಲಕ್ಷ ಸಿಗಲಿದೆ.

ಪ್ರಸ್ತುತ ಸರ್ಕಾರ ನೀಡುವ ಪರಿಹಾರ ಹಣದಲ್ಲಿ ಮನೆ ನಿರ್ಮಾಣಕ್ಕೆ ಕಷ್ಟಕರವಾಗಿದ್ದು, ಹಿಂದೆ ಬಿಜೆಪಿ ಸರ್ಕಾರ ನೀಡಿದಂತೆ ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕೆನ್ನುವ ಕೂಗು ಕೇಳಿಬಂದಿದೆ. ಮನೆ ಮಂಜೂರು: ಪೂರ್ತಿ ಮನೆ ಕಳೆದುಕೊಂಡವರಿಗೆ ₹1.20 ಲಕ್ಷ ಪರಿಹಾರ ನೀಡಲಾಗಿದೆ. ಜತೆಗೆ ಅವರ ಹೆಸರನ್ನು ಸರ್ಕಾರದ ವಸತಿ ಯೋಜನೆಯಲ್ಲಿ ಸೇರ್ಪಡೆ ಮಾಡಿ ಮನೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.ಶಿರೂರು ದುರಂತ: ಇಂದಿನಿಂದ ಮತ್ತೆ ಶೋಧ ಕಾರ್ಯ

ಕಾರವಾರ: ಶಿರೂರು ಗುಡ್ಡ ದುರಂತದಲ್ಲಿ ಕಣ್ಮರೆಯಾದ ಮೂವರ ಪತ್ತೆ ಕಾರ್ಯಾಚರಣೆ ಮಂಗಳವಾರ ಮತ್ತೆ ಆರಂಭವಾಗಲಿದೆ.

ಗಂಗಾವಳಿ ನದಿಯಲ್ಲಿ ನೀರಿನ ಹರಿವಿನ ವೇಗ ಸ್ವಲ್ಪ ಕಡಿಮೆಯಾದ ಹಾಗೂ ಮಳೆ ಇಳಿಮುಖವಾಗಿರುವುದರಿಂದ ಕಾರ್ಯಾಚರಣೆ ಆರಂಭವಾಗಲಿದೆ.ಮುಳುಗುತಜ್ಞ ಈಶ್ವರ ಮಲ್ಪೆ, ನೌಕಾಪಡೆ ಹಾಗೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಂಯುಕ್ತವಾಗಿ ಶೋಧ ಕಾರ್ಯಾಚರಣೆ ನಡೆಸಲಿವೆ. ದುರಂತದಲ್ಲಿ ಒಟ್ಟೂ 11 ಜನರು ಕಣ್ಮರೆಯಾಗಿದ್ದು 8 ಜನರ ಮೃತದೇಹ ಪತ್ತೆಯಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ