ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಪುಣ್ಯವಂತರು

KannadaprabhaNewsNetwork |  
Published : Nov 18, 2025, 02:15 AM IST
17ಐಎನ್‌ಡಿ1, ಇಂಡಿ ತಾಲೂಕಿನ ತಡವಲಗಾ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲೊ ಅದು ಬೇರೆ. ಆದರೆ ಕ್ಷೇತ್ರದ ಜನತೆ ಈಗ ಕೊಟ್ಟಿರುವ ಅವಕಾಶ ರಾಜ್ಯದ ಜನ ಇಂಡಿ ಭಾಗದ ಕಡೆಗೆ ತಿರುಗಿ ನೋಡುವ ಹಾಗೆ ಬದಲಾವಣೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶರಣರು, ಸಂತರು, ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ನವಜೀವನಕ್ಕೆ ಕಾಲಿಡಬೇಕಾದರೆ ಪುಣ್ಯ ಮಾಡಿರಬೇಕು. ಪುಣ್ಯ ಮಾಡಿದವರಿಗೆ ಮಾತ್ರ ಅಂತಹ ಅವಕಾಶ ದೊರೆಯುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಶ್ರೀ ಮರುಳಸಿದ್ದೇಶ್ವರ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಸರಳ ಸಾಮೂಹಿಕ ವಿವಾಹ ಹಾಗೂ ಸರ್ವ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಜರು ಸಂಸ್ಕಾರ, ಸಂಸ್ಕೃತಿ ಕಲಿಸಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ಕೃಷಿ ಪ್ರಧಾನವಾದ ತಡವಲಗಾ ಗ್ರಾಮ ನಿಂಬೆ ಬೆಳೆಗೆ ಪ್ರಸಿದ್ದಿ ಪಡೆದಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ನಿಂಬೆ ಬೆಳೆಯುವ ಗ್ರಾಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಗ್ರಾಮದವರು ದೇವಸ್ಥಾನಗಳ ಜೀರ್ಣೊದ್ಧಾರ, ರಥೋತ್ಸವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು. ನಿಂಬೆ ಬೆಳೆಯುವ ಪ್ರದೇಶದ ವ್ಯಾಪ್ತಿಗೆ ರಾಷ್ಟ್ರೀಯ ಹೆದ್ದಾರಿ ಬಂದಿದೆ. ಕೃಷ್ಣೆಯ ನೀರು ಬಂದಿದೆ. ಕೆರೆಗಳು ತುಂಬಿವೆ. ಮುಂದೊಂದು ದಿನ ಉತ್ಪಾದನೆಯಿಂದ ರೈತರ ಬದುಕು ಬದಲಾವಣೆಯಾಗುವ ಹಂತ ತಲುಪಲಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡುವುದು ಆದರ್ಶಮಯವಾದದ್ದು, ಇದು ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಮಿತ ಸಂತಾನದೊಂದಿಗೆ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ತಡವಲಗಾ ಗ್ರಾಮದಲ್ಲಿ ಭಕ್ತರೆಲ್ಲ ಕೂಡಿ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ನವ ವಧು-ವರರು ದಾಂಪತ್ಯ ಜೀವನ ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು-ಕೀಳೆನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳು ಈ ಗ್ರಾಮದಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.

ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಜಿಗಜಿಣಗಿಯ ಮುಪ್ಪಿನಾರ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಂಜುನಾಥ ವಂದಾಲ, ನಾಗುಗೌಡ ಪಾಟೀಲ, ಚಂದ್ರಶೇಖರ ಹೂಗಾರ, ಬಾಬುಸಾಹುಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ತಮ್ಮಣ್ಣ ಪೂಜಾರಿ, ಅಣ್ಣಾರಾಯ ಮದರಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೆ ವೇಳೆ 14 ಜೋಡಿ ನವ ಜೀವನಕ್ಕೆ ಕಾಲಿಟ್ಟರು.

ಸಚಿವನಾಗುವ ಯೋಗ ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತದೆ. ಸಂಸದ ಜಿಗಜಿಣಗಿ ಅವರ ನಸೀಬ್‌ ಬೇರೆಯಾಗಿದೆ. ಅವರು ಒಂದೇ ಬಾರಿ ಶಾಸಕರಾಗಿ, ಸಚಿವರಾಗಿದ್ದಾರೆ. ಕೆಲವರು ಅಲ್ಲಿ ಇಲ್ಲಿ ಬಡೆದಾಡಿ ಸಚಿವರಾಗುತ್ತಾರೆ. ನಮ್ಮ ಪರಿಸ್ಥಿತಿಯು ಅದೇ ಇದೆ. ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲೊ ಅದು ಬೇರೆ. ಆದರೆ ಕ್ಷೇತ್ರದ ಜನತೆ ಈಗ ಕೊಟ್ಟಿರುವ ಅವಕಾಶ ರಾಜ್ಯದ ಜನ ಇಂಡಿ ಭಾಗದ ಕಡೆಗೆ ತಿರುಗಿ ನೋಡುವ ಹಾಗೆ ಬದಲಾವಣೆ ಮಾಡಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ