ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಅಕ್ಟೋಬರ್ 28ರ ಬುಧವಾರ ತಾಲೂಕು ಟಿಎಪಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ತೋಟಿ ನಾಗರಾಜ್ ಅವರನ್ನು ಸಂಘದ ನಿರ್ದೇಶಕರ ಒಮ್ಮತದಂತೆ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದರು. ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಟಿಎಪಿಎಂಎಸ್ ಅಧ್ಯಕ್ಷರಾಗಿದ್ದ ಮೆಡಿಕಲ್ ವೆಂಕಟೇಶ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ಜೆಡಿಎಸ್ ಹಿರಿಯ ಮುಖಂಡರಾದ ಹಾಗೂ ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್ ಅವರನ್ನು ಸಂಘದ ಸದಸ್ಯರ ಒಮ್ಮತದಂತೆ ಆಯ್ಕೆ ಮಾಡಲಾಗಿದೆ. ಇದೇ 28ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದರು. ಹೋಬಳಿ ಕೇಂದ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಏತ ನೀರಾವರಿ ಯೋಜನೆ ಮೂಲಕ ಈ ಭಾಗದ ಕೆರೆಗಳಿಗೆ ನೀರು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಕೆಪಿಎಸ್ ಶಾಲೆ ಕಟ್ಟಡಕ್ಕೆ 2 ಕೋಟಿ ಅನುದಾನ ಗ್ರಾಮದ ಪರಿಮಿತಿಯಲ್ಲಿ ವಿವಿಧ ರಸ್ತೆಗಳು ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ಈ ಭಾಗದ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷಗಳಾದ ದೊರೆಸ್ವಾಮಿ, ವಿ ಎನ್ ಮಂಜುನಾಥ್, ಶಿವಸ್ವಾಮಿ, ಪಟೇಲ್ ಕುಮಾರ್, ಹುಲಿಕೆರೆ ಸಂಪತ್ ಕುಮಾರ್, ಮಹಮ್ಮದ್ ಜಾವದ್, ಎಂ ಎಸ್ ಸುರೇಶ್, ಕೃಪಾ ಶಂಕರ್, ಶಿವಕುಮಾರ್, ಮಂಜುನಾಥ್, ಶಂಕರ್, ಪೋಲಿಸ್ ಬೆಟ್ಟಯ್ಯ ಸೇರಿದಂತೆ ಇತರರು ಹಾಜರಿದ್ದರು.