ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ವತಿಯಿಂದ ‘ಹಳೆ ಬೇರು ಹೊಸ ಚಿಗುರು’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಭಾನುವಾರ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 180 ಮಂದಿ ಸ್ಥಳೀಯ ಎಲ್ಲ ಧರ್ಮದ ನಿರ್ಗತಿಕ ಹಿರಿಯ ನಾಗರಿಕರಿಗೆ ಛತ್ರಿ ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸಲಾಯಿತು.ಈ ವೇಳೆ ಮಾತನಾಡಿದ ತೊಟ್ಟಂ ಚರ್ಚ್ ಧರ್ಮಗುರು ಡೆನಿಸ್ ಡೆಸಾ, ಎಲ್ಲ ಧರ್ಮದ ಜನರಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು ಮತ್ತು ಬೆಳೆಸುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ. ಎಲ್ಲ ಧರ್ಮಗಳ ಸುಮಾರು 300 ಹಿರಿಯ ನಾಗರಿಕರು ಒಂದೇ ಸೂರಿನಡಿ ಬರುತ್ತಿರುವುದು ಕೇವಲ ಕಾರ್ಯಕ್ರಮದ ಪ್ರಯೋಜನವನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಶಾಂತಿ ಮತ್ತು ಐಕ್ಯತೆಯನ್ನು ಉತ್ತೇಜಿಸುವಲ್ಲಿ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪ್ರೋ. ಹಿಲ್ಡಾ ರೊಡ್ರಿಗಸ್ ಮಾತನಾಡಿ, ನಾವು ವೃದ್ಧಾಪ್ಯದ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರಬೇಕು. ಆದಷ್ಟು ನಿಮ್ಮ ಜೀವನದ ಉಳಿದ ದಿನಗಳನ್ನು ಸದಾ ಮುಗುಳ್ನಗುತ್ತಾ, ಮನೆಯವರು ನೀಡುವ ಊಟ ತಿಂದು, ವಾಕಿಂಗ್, ಪಿಕ್ನಿಕ್ ಹೀಗೆ ಎಂಜಾಯ್ ಮಾಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇದು ಬಹಳಷ್ಟು ಆರೋಗ್ಯ ತೊಡಕುಗಳನ್ನು ತಪ್ಪಿಸುತ್ತದೆ ಎಂದರು.ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ, ಮಲ್ಪೆ ಸಿಎಸ್‌ಐ ಎಬನೇಜರ್ ಚರ್ಚ್ ಪಾಸ್ಟರ್ ವಂ.ಎಡ್ವಿನ್ ಜೋಸೆಫ್, ಉಪಾಧ್ಯಕ್ಷ ನಕ್ವಾ ಯಾಹ್ಯ, ಆಗ್ನೆಲ್ ಫರ್ನಾಂಡಿಸ್, ಗ್ಲಾಡ್ಸನ್, ವಿನೋದ್, ಹಿರಿಯ ನಾಗರಿಕರಾದ ಲಲಿತಾ ಆಚಾರ್ತಿ, ನೆಲ್ಸನ್ ಅಂಚನ್, ಸಮಿತಿಯ ಕಾರ್ಯದರ್ಶಿ ಲೆಸ್ಲಿ ಆರೋಜಾ ಹಾಗೂ ಇತರರು ಉಪಸ್ಥಿತರಿದ್ದರು.