ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಯುಪಿಎ ಕೇಂದ್ರ ಸರ್ಕಾರದ ಅವಧಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದ ಬಳಿಕವೂ ಅರಣ್ಯ ವಾಸಿಗಳು ಹಾಗೂ ಬುಡಕಟ್ಟು ನಿವಾಸಿಗಳಿಗೆ ಸಂಪೂರ್ಣ ಪುನರ್ವಸತಿ ಕಲ್ಪಿಸಲು ಆಗಿಲ್ಲ. ಒಂದೇ ಸೆಟ್ಲ್ ಮೆಂಟ್‌ನಲ್ಲಿ ಪರಿಹಾರ ನೀಡುವ ಪ್ರಯತ್ನ ನಡೆಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರ ಕಟ್ಟಡ ಉದ್ಘಾಟಿಸಿದ ಬಳಿಕ ಸಂವಾದಕ್ಕೂ ಮುನ್ನ ಮಾತನಾಡಿ, ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಮುಂದಿನ ತಿಂಗಳು ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುತ್ತೇನೆ ಎಂದರು.ಅರಣ್ಯ ಹಕ್ಕು ಕಾಯಿದೆ ಬಂದ ಬಳಿಕ ಶೇ.50 ರಿಂದ 60 ರಷ್ಟು ಪುನರ್ವಸತಿ ಕಲ್ಪಿಸಲಾಗಿದೆ. ನಮ್ಮ ಸರ್ಕಾರದಲ್ಲಿ ಅರಣ್ಯ ವಾಸಿಗಳು, ಬುಡಕಟ್ಟು ಜನರ ಮನವೊಲಿಸಿ ಒಂದೇ ಸಲ ಹೆಚ್ಚಿನ ಪರಿಹಾರ ಕೊಟ್ಟು ಮುಖ್ಯ ವಾಹಿನಿಗೆ ತರಲು ಚಿಂತನೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನಪರ ಸರ್ಕಾರ ಜನರ ಹಿತಕ್ಕಾಗಿ ದುಡಿಯುತ್ತಿದೆ. ಆದಿ ವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಮಹದೇಶ್ವರ ಬೆಟ್ಟದಲ್ಲಿ ನಡೆವ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.
ಜೇಣು ಸಾಗಾಣಿಕೆಗೆ ಆದಿವಾಸಿಗಳಿಗೆ ಅವಕಾಶ ಮಾಡಿಕೊಡಿ ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಸಾದ್ಯವಾದರೆ ನಿಮ್ಮ ಮಟ್ಟದಲ್ಲೇ ಅವಕಾಶ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಆದಿ ವಾಸಿಗಳಿಗೆ ಕಾಡಿನಲ್ಲಿ ಲಾಂಟಾನ ತೆಗೆಯಲು ಅವಕಾಶ ಕೊಡಿ. ಬುಡಕಟ್ಟು ಜನಾಂಗದ ಒಬ್ಬನೇ ಗುತ್ತಿಗೆದಾರ ಇದ್ದಾರೆ ಇದು ಸರಿಯಲ್ಲ ಎಂಬ ಮುಖಂಡರೊಬ್ಬರ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು ಓಪನ್ ಟೆಂಡರ್ ಮಾಡಿ. ವಿದ್ಯಾರ್ಥಿ ವೇತನ ವಿಳಂಭಕ್ಕೆ ಅವಕಾಶ ಬೇಡ, ೧೫ ದಿನಗಳೊಳಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದರು.
ಕಾಡಂಚಿನ ಆದಿ ವಾಸಿಗಳು ವಾಸಿಸುವ ಕಾಲೋನಿ, ಹಾಡಿಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿವ ನೀರು, ರಸ್ತೆ, ಚರಂಡಿಗೆ, ಸೋಲಾರ್ ದೀಪ ಅಳವಡಿಸಲು ಬಿಡಿ ಎಂದು ಅಧಿಕಾರಿಗಳಿಗೆ ಹೇಳಿದರು.ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಮಂಜುನಾಥ್, ಅರಣ್ಯ ಇಲಾಖೆ ಪಿಸಿಸಿಎಫ್ ಸುಭಾಷ್ ಮಾಲ್ಕಡೆ, ಜಿಲ್ಲಾಧಿಕಾರಿ ಶಿಲ್ಪ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್, ಮೈಸೂರು ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಬಿಆರ್‌ಟಿ ಉಪ ಸಂರಕ್ಷಣಾಧಿಕಾರಿ ಶ್ರೀಪತಿ, ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಎಸಿಎಫ್ ಗಳಾದ ಎನ್.ಪಿ.ನವೀನ್ ಕುಮಾರ್, ಕೆ.ಸುರೇಶ್, ಸತೀಶ್, ಆರ್‌ಎಫ್‌ಒಗಳಾದ ಬಿ.ಎಂ.ಮಲ್ಲೇಶ್, ಮಹದೇವು,ಪುನೀತ್ ಕುಮಾರ್ ಸೇರಿದಂತೆ ಬುಡಕಟ್ಟು ಸಮಾಜದ ಮುಖಂಡರು ಇದ್ದರು.