ಕನ್ನಡಪ್ರಭ ವಾರ್ತೆ ತುಮಕೂರು
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ 11 ದಿನಗಳ ಕಾಲ ಅದ್ಧೂರಿಯಾಗಿ ತುಮಕೂರು ದಸರಾ ಉತ್ಸವ ನಡೆದಿದ್ದು, ವಿಜಯದಶಮಿಯ ದಿನ ಬುಧವಾರ ಮೈಸೂರು ಮಾದರಿಯಲ್ಲೇ ಅಂಬಾರಿ ಹೊತ್ತ ಆನೆಯೊಂದಿಗೆ ಜಂಬೂ ಸವಾರಿ ವೈಭವಯುತವಾಗಿ ನಡೆಯಿತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಧ್ಯಾಹ್ನ ನಂದಿಧ್ವಜಕ್ಕೆ ಹಾಗೂ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಟೌನ್‌ಹಾಲ್ ವೃತ್ತದಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆಯಲ್ಲಿ ಮಡಿಕೇರಿಯ ಲಕ್ಷ್ಮಣ ಚಾಮುಂಡೇಶ್ವರಿ ದೇವಿ ಕೂರಿಸಿದ್ದ ಅಂಬಾರಿ ಹೊತ್ತು ಹೆಜ್ಜೆ ಹಾಕಿದರೆ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮೀ ಹಾಗೂ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಆನೆಗಳು ಅಂಬಾರಿ ಹೊತ್ತಿದ್ದ ಲಕ್ಷ್ಮಣನ ಅಕ್ಕಪಕ್ಕದಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ನಗರದ ಸುಮಾರು 50ಕ್ಕೂ ಅಧಿಕ ದೇವಾಲಯಗಳ ಉತ್ಸವ ಮೂರ್ತಿಗಳು ಜಂಬೂಸವಾರಿಯಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು. ಇದರೊಂದಿಗೆ ಎತ್ತಿನ ಗಾಡಿಗಳು, ಪೊಲೀಸ್ ಕುದುರೆಗಳು ಪಾಲ್ಗೊಂಡಿದ್ದು ನೋಡುಗರ ಗಮನ ಸೆಳೆಯಿತು.ಟೌನ್‌ಹಾಲ್ ವೃತ್ತದಿಂದ ಆರಂಭವಾದ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ಚಂಡೇವಾದ್ಯ, ಯಕ್ಷಗಾನ, ಕಥಕ್ಕಳಿ, ವೀರಗಾಸೆ, ನಂದಿಧ್ವಜ, ಹುಲಿ ವೇಷ, ಶಿವಪಾರ್ವತಿ, ಪೂಜಾ ಕುಣಿತ, ಸೋಮನ ಕುಣಿತ, ಚಿಟ್ಟಿಮೇಳ, ನಾಸಿಕ್ ಡೋಲು, ಗೊರವರ ಕುಣಿತ, ಚಂಡೇವಾದ್ಯ, ಗಾರುಡಿಗೊಂಬೆ, ಕೀಲು ಕುದುರೆ, ಕಂಸಾಳೆ, ಕೋಲಾಟ, ಅರೇವಾದ್ಯ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಕಲಾ ತಂಡಗಳ ಪ್ರದರ್ಶನ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಆಕರ್ಷಿಸಿತು. ಜತೆಗೆ ಕಲ್ಪತರುನಾಡಿನಲ್ಲ ಸಾಂಸ್ಕೃತಿಕ ವೈಭವವನ್ನು ಮೇಳೈಸಿತು. ಸುಡು ಬಿಸಿಲನ್ನು ಲೆಕ್ಕಿಸದೇ ಜಂಬೂಸವಾರಿ ಮೆರವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದು ಕಂಡು ಬಂತು. ಜಂಬೂ ಸವಾರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಶಾಸಕರಾದ ಟಿ.ಬಿ. ಜಯಚಂದ್ರ, ಜ್ಯೋತಿಗಣೇಶ್, ಕನ್ನಿಕಾ ಪರಮೇಶ್ವರ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಮಹಾನಗರ ಪಾಲಿಕೆ ಆಯುಕ್ತೆ ಶುಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ದರಾಮಣ್ಣ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು. ದುಬಾರೆಯಿಂದ ಬಂದಿದ್ದ ಲಕ್ಷ್ಮಣನ ಪಕ್ಕದಲ್ಲಿ ಸಾಗಿದ ಎರಡು ಲಕ್ಷ್ಮೀ ಆನೆಗಳು ಗಾಂಭೀರ್ಯದಿಂದ ಮೆರವಣಿಗೆಯ ಸೊಬಗನ್ನು ಇಮ್ಮಡಿಗೊಳಿಸಿದವು. ತುಮಕೂರಿನಲ್ಲಿ 3ನೇ ಬಾರಿ ಜರುಗುತ್ತಿರುವ ಈ ಜಂಬೂಸವಾರಿಯನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಕಣ್ತುಂಬಿಕೊಂಡಿತು. ಜಂಬೂಸವಾರಿ ಭವ್ಯ ಮೆರವಣಿಗೆಯಲ್ಲಿ ತುಮಕೂರು ತಾಲ್ಲೂಕು ಕಚೇರಿಯ ಗಣಪತಿ, ಮಂಡಿಪೇಟೆಯ ಶ್ರೀ ಭದ್ರಕಾಳಿ ಹಾಗೂ ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಚಿಕ್ಕಪೇಟೆಯ ಶ್ರೀ ಕೋಟೆ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರಸ್ವಾಮಿ, ವಿಶ್ವಕರ್ಮ ಕಾಳಿಕಾಂಬ, ಬ್ರಹ್ಮಕುಮಾರಿ ಈಶ್ವರಿ, ಅಂಕಾಲೇಶ್ವರಿ ಹಾಗೂ ನಾಲ್ಕು ಗಾಲಿ ಬಾವಿ ಗಣೇಶ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಮಾರಿಯಮ್ಮ ನಗರದ ಮಾರಿಯಮ್ಮ ದೇವಿ, ಶ್ರೀ ವೀರಭದ್ರಸ್ವಾಮಿ ಸೇರಿದಂತೆ 50 ಕ್ಕೂ ಗ್ರಾಮ ದೇವತೆಗಳು ಹೂಗಳಿಂದ ಅಲಂಕರಿಸಲ್ಪಟ್ಟ ಸಾರೋಟು(ಬೆಳ್ಳಿ ರಥ)ಗಳಲ್ಲಿ ಸಾಗಿದ್ದು, ಜನರಲ್ಲಿ ಅದ್ವಿತೀಯ ಭಕ್ತಿ ಭಾವ ಮೂಡಿಸಿತು. ಶಮೀ ಪೂಜೆ ಸಂಪನ್ನ:
ರಾಜ್ಯ ಕಾಡು ಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಟಿ.ಬಿ. ಜಯಚಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್‌ರಾಜ್ ಎಂ., ಉಪಮುಖ್ಯಮಂತ್ರಿಗಳ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.