ಸರ್ವಜ್ಞನ ಐಕ್ಯ ಸ್ಥಳ ಅಭಿವೃದ್ಧಿಗೆ ಅನುದಾನಕ್ಕೆ ಆಗ್ರಹಿಸಿ ಹೆದ್ದಾರಿ ತಡೆ ಬೆದರಿಕೆ

KannadaprabhaNewsNetwork |  
Published : Nov 25, 2024, 01:02 AM IST
 ವರಕವಿ ಸರ್ವಜ್ಞ ಅಭಿವೃದ್ದಿ ಪ್ರಾಧಿಕಾರ ಹಾಗೂ ವಿವಿಧ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸರ್ವಜ್ಞ ಪ್ರಾಧಿಕಾರದಿಂದ ಅನುದಾನ ಒದಗಿಸಿ ಮಾಸರಿನಲ್ಲಿರುವ ಅವರ ಐಕ್ಯಸ್ಥಳ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಮಾಸೂರು ಗ್ರಾಪಂ ಅಧ್ಯಕ್ಷ, ಸದಸ್ಯರು ಆಗ್ರಹಿಸಿದರು.

ರಟ್ಟೀಹಳ್ಳಿ: ಸರ್ವಜ್ಞ ಪ್ರಾಧಿಕಾರದಿಂದ ಅನುದಾನ ಒದಗಿಸಿ ಮಾಸರಿನಲ್ಲಿರುವ ಅವರ ಐಕ್ಯಸ್ಥಳ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಮಾಸೂರು ಗ್ರಾಪಂ ಅಧ್ಯಕ್ಷ, ಸದಸ್ಯರು ಆಗ್ರಹಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನ ಹಾಗೂ ಸರ್ವಜ್ಞನ ಐಕ್ಯ ಸ್ಥಳ ಮಾಸೂರಿಗೆ ಪ್ರಾಧಿಕಾರದ ಶೇ. 50ಕ್ಕಿಂತ ಹೆಚ್ಚಿನ ಅನುದಾನ ಒದಗಿಸಿ ಶೀಘ್ರವೇ ಐಕ್ಯಸ್ಥಳ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರ 2024-25ನೇ ಸಾಲಿನ ಆಯವ್ಯಯದಲ್ಲಿ ಸರ್ವಜ್ಞನ ಸ್ಮಾರಕ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ. ಕಳೆದ ಮಾರ್ಚ್‌ನಲ್ಲಿ 8 ದಿನಗಳ ಕಾಲ ಗ್ರಾಮ ಪಂಚಾಯತ್‌ಗೆ ಬೀಗ ಹಾಕಿ ಅಹೋರಾತ್ರಿ ಧರಣಿ ಮಾಡಿದ ಫಲವಾಗಿ ವಿಶ್ವಗುರು ಬಸವಣ್ಣನವರ ಐಕ್ಯವಾದ ಕೂಡಲಸಂಗಮ ಮಾದರಿಯಲ್ಲಿ ಸರ್ವಜ್ಞರು ಐಕ್ಯವಾದ ಸ್ಥಳ ಅಭಿವೃದ್ಧಿ ಮಾಡಲು ವಿಸ್ತೃತವಾದ ಅಂದಾಜು ಪಟ್ಟಿಯೊಂದಿಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲು ಕನ್ನಡ ಮತ್ತು ಸಂಸ್ಕ್ರತಿ ನಿರ್ದೇಶನಾಲಯ ಜೂನ್‌ನಲ್ಲಿ ಸೂಚಿಸಿತ್ತು. ಆದರೆ 5 ತಿಂಗಳು ಕಳೆದರೂ ಇಲ್ಲಿಯವರೆಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈಗಾಗಲೇ ಸರ್ಕಾರ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ 2 ಎಕರೆಗಿಂತ ಹೆಚ್ಚಿನ ಭೂಮಿ ಖರೀದಿಸಿದೆ, ಪ್ರಾಧಿಕಾರದ ಸಭೆ ಕರೆದು ಕಚೇರಿ ವಿವಾದ ಬಗೆಹರಿಸಲು ಆಯುಕ್ತರು ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ ಇಲ್ಲಿಯವರೆಗೂ ಪ್ರಯತ್ನಿಸದೆ ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ. ಪ್ರಾಧಿಕಾರದ ಕಚೇರಿಯನ್ನು ಹಿರೇಕೆರೂರ, ಮಾಸೂರ, ಅಬಲೂರ ಬಿಟ್ಟು ತಾತ್ಕಾಲಿಕವಾಗಿ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಸ್ಥಾಪಿಸಿ ಇಲ್ಲವೇ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಿ ಎಂದು ಆಗ್ರಹಿಸಿದರು.

ಸರ್ವಜ್ಞನ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ವಿಷಯ ಬದಿಗಿರಿಸಿ, ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿ, ಸರ್ವಜ್ಞನ ಐಕ್ಯಸ್ಥಳ ಮಾಸೂರಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನವಹಿಸಿ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶೀಘ್ರವೇ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ ಪಾಟೀಲ, ಕಾವ್ಯ ಹಿತ್ತಲಮನಿ, ಪೂರ್ಣಿಮಾ ಹೊನ್ನಾಳ್ಳಿ, ರಶೀದಸಾಬ್ ಕುಪ್ಪೇಲೂರ, ಶಿವಕುಮಾರ ಹೊರಟ್ಟಿ, ಪಾರ್ವತಮ್ಮ ಮುಸುಂಡಿ, ಶಾರದಾ ಕಲಾಲ, ಫಾತಿಮುನ್ನೀಸಾ ಬಳ್ಳಾರಿ ಗ್ರಾಮಸ್ಥರಾದ ಮಲ್ಲೇಶಪ್ಪ ಗುತ್ತೇಣ್ಣನವರ, ದೇವೇಂದ್ರಪ್ಪ ಮಾಳಗಿ, ಸುರೇಶ ಬಡಿಗೇರ, ನಾಗನಗೌಡ ಪಾಟೀಲ, ಪ್ರಭು ನಡುವಿನಮನಿ, ಈಶ್ವರಪ್ಪ ಹೊನ್ನಾಳ್ಳಿ, ಮಂಜುನಾಥ ಕಲಾಲ, ಮಂಜುನಾಥ ಹೊನ್ನಾಳ್ಳಿ ಮುಂತಾದವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ