ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿ ಮೂರು ಅಂಡರ್‌ಪಾಸ್

KannadaprabhaNewsNetwork |  
Published : Apr 19, 2025, 12:47 AM IST
 ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್  | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ನೆಲ್ಯಾಡಿ- ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ನೆಲ್ಯಾಡಿ- ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭರವಸೆ ನೀಡಿದ್ದಾರೆ.

ರಾ. ಹೆ. ೭೫ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಎರಡು ಬದಿ ಸರ್ವೀಸ್ ರಸ್ತೆಯ ಪಕ್ಕ ತಡೆಗೋಡೆ ನಿರ್ಮಿಸಿ ಎತ್ತರಿಸಿದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ರೀತಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ನೆಲ್ಯಾಡಿ ಪೇಟೆ ಇಬ್ಭಾಗವಾಗಲಿದೆ. ಇದರಿಂದ ವರ್ತಕರಿಗೆ, ಸಾರ್ವಜನಿಕರಿಗೆ ತೀರಾ ತೊಂದರೆಯಾಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಕಲ್ಲಡ್ಕ ಮಾದರಿಯಲ್ಲಿಯೇ ಮೇಲ್ಸೇತುವೆ ಹೆದ್ದಾರಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದರಿಂದ ನೆಲ್ಯಾಡಿ ಪೇಟೆಯಲ್ಲಿನ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ.

ಈ ಮಧ್ಯೆ ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕಾಗಿ ಸಂಸದರ ಸಹಿತ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನೆಲ್ಯಾಡಿಗೆ ಆಗಮಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರೊಂದಿಗೆ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯವರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಿ ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ಹೋರಾಟ ಸಮಿತಿಯವರೊಂದಿಗೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ನೆಲ್ಯಾಡಿ ಪೇಟೆಯಲ್ಲಿ ಈಗಾಗಲೇ ಎರಡು ಅಂಡರ್‌ಪಾಸ್ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯೂ ಅರ್ಧದಷ್ಟು ಮುಗಿದಿದೆ. ಪೇಟೆಯಲ್ಲಿ ಹೆಚ್ಚುವರಿಯಾಗಿ ಮತ್ತೆ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಶೀಘ್ರದಲ್ಲೇ ಕಾಮಗಾರಿ ನಡೆಸುವುದಾಗಿಯೂ ಹೇಳಿದರು. ಸಭೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಪದಾಧಿಕಾರಿಗಳಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಉಷಾ ಅಂಚನ್, ನಾಝೀಂ ಸಾಹೇಬ್, ಕೆ.ಪಿ.ತೋಮಸ್, ಕೆ.ಎಂ.ಹನೀಫ್, ಗಣೇಶ್ ರಶ್ಮಿ, ರವಿ ಸುರಕ್ಷಾ, ರಾಮಣ್ಣ ಟೈಲರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮತ್ತಿತರರು ಇದ್ದರು.-------------ಅಂಗಡಿ-ಮುಂಗಟ್ಟು ಬಂದ್;ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕೆ ಒತ್ತಾಯಿಸಿ ನೆಲ್ಯಾಡಿ ಪೇಟೆಯ ವರ್ತಕರು ಮಂಗಳವಾರ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ