1 ಲಕ್ಷ ರುಪಾಯಿಗೆ ಹಸುಗೂಸು ಮಾರಾಟ: ಮೂವರ ಬಂಧನ

KannadaprabhaNewsNetwork |  
Published : May 29, 2025, 12:35 AM IST

ಸಾರಾಂಶ

ಹೆರಿಗೆಯಾಗಿ 2 ದಿನದಲ್ಲೇ ಮಗುವನ್ನು 1 ಲಕ್ಷ ರುಪಾಯಿಗೆ ಮಾರಾಟ ಮಾಡಿದ ಘಟನೆ ಕಾನೂರು ಗ್ರಾಮ ಪಂಚಾಯಿತಿಯ ಹರಾವರಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಹೆರಿಗೆಯಾಗಿ 2 ದಿನದಲ್ಲೇ ಮಗುವನ್ನು 1 ಲಕ್ಷ ರುಪಾಯಿಗೆ ಮಾರಾಟ ಮಾಡಿದ ಘಟನೆ ಕಾನೂರು ಗ್ರಾಮ ಪಂಚಾಯಿತಿಯ ಹರಾವರಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ. ಹರಾವರಿ ಗ್ರಾಮದ ರತ್ನ, ಸದಾನಂದ ದಂಪತಿ ಹಾಗೂ ಕೊಪ್ಪದ ನಿವೃತ್ತ ನರ್ಸ್ ಕುಸುಮ ಬಂಧಿತರಾಗಿದ್ದಾರೆ.

ಘಟನೆಯ ಹಿನ್ನೆಲೆ:

ಕಾನೂರು ಗ್ರಾಮ ಪಂಚಾಯಿತಿಯ ಹರಾವರಿ ಗ್ರಾಮದ ಕೋಣನಗುಡ್ಡದ ರತ್ನರನ್ನು ಹೆರಿಗೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 22 ರಂದು ಹೆಣ್ಣು ಮಗುವಿನ ಜನನವಾಗಿತ್ತು. ಮಗು ಹುಟ್ಟಿ 2 ದಿನಕ್ಕೆ ಕೊಪ್ಪದ ನಿವೃತ್ತ ನರ್ಸ್ ಕುಸುಮ ಎಂಬುವರ ಮೂಲಕ 1 ಲಕ್ಷ ರುಪಾಯಿಗೆ ಒಪ್ಪಂದ ಮಾಡಿಕೊಂಡು ಸ್ವಲ್ಪ ಹಣ ಪಡೆದು ಮಗುವನ್ನು ಕಾರ್ಕಳದ ರಾಘವೇಂದ್ರ ಎಂಬುವವರಿಗೆ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ನರಸಿಂಹರಾಜಪುರ ಪೊಲೀಸ್‌ ಠಾಣಾಧಿಕಾರಿ ನಿರಂಜನಗೌಡ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಒಟ್ಟಾಗಿ ಕಾರ್ಕಳಕ್ಕೆ ಹೋಗಿ ಮಗುವನ್ನು ಸುರಕ್ಷಿತವಾಗಿ ತಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಮಗು ಪಡೆದ ರಾಘವೇಂದ್ರ, ನಿವೃತ್ತ ನರ್ಸ್‌ ಕುಸುಮ ಅವರ ಸಹೋದರನಾಗಿದ್ದಾನೆ. ತಮಗೆ ಮಕ್ಕಳು ಇಲ್ಲದೆ ಇರುವುದರಿಂದ ಸಾಕಲು ಮಗು ಪಡೆದಿದ್ದೇನೆ ಎಂದು ರಾಘವೇಂದ್ರ ಪೊಲೀಸರ ತನಿಖೆಯಲ್ಲಿ ತಿಳಿಸಿದ್ದಾನೆ. ನರಸಿಂಹರಾಜಪುರ ಪೊಲೀಸರು ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿ ಮಗುವಿನ ತಂದೆ ಸದಾನಂದ, ತಾಯಿ ರತ್ನ ಹಾಗೂ ಮಗು ಮಾರಾಟಕ್ಕೆ ಮದ್ಯವರ್ತಿಯಾಗಿ ಕೆಲಸ ಮಾಡಿದ ನಿವೃತ್ತ ನರ್ಸ್ ಕುಸುಮ ಅವರನ್ನು ಬಂಧಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ