ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕರ ಹತ್ಯೆಯಲ್ಲಿ ಮೂವರ ಬಂಧನ

KannadaprabhaNewsNetwork |  
Published : Apr 23, 2025, 12:30 AM IST
ಗಾಯಾಳು ತೇಶ ತಾಂಡೇಲ | Kannada Prabha

ಸಾರಾಂಶ

ನಿತೇಶ ತಾಂಡೇಲ, ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಬಂಧಿತ ಆರೋಪಿಗಳು.

ಕಾರವಾರ: ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕರ ಹತ್ಯೆ ಪ್ರಕರಣದಲ್ಲಿ ಮೂವರನ್ನು ಕಾರವಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿತೇಶ ತಾಂಡೇಲ, ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಬಂಧಿತ ಆರೋಪಿಗಳು.

ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ಈ ಹತ್ಯೆಯ ಸಂಚು, ನಡೆದ ಘಟನೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಗೋವಾದ ಪೊಲೋಲೆಂ ಬೀಚಿನಲ್ಲಿ ನಗರಸಭೆ ಮಾಜಿ ಸದಸ್ಯ ಸತೀಶ ಕೊಳಂಬಕರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ನಿತೇಶ ತಾಂಡೇಲ, ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಸ್ನೇಹಿತರಾಗಿದ್ದರು. ಸತೀಶ ಕೊಳಂಬರ ಪಡೆದಿದ್ದ ನಗರಸಭೆಯ ಅಂಗಡಿಯನ್ನು ನಿತೇಶ ₹4 ಲಕ್ಷ ಮುಂಗಡ ಹಾಗೂ ₹30 ಸಾವಿರ ಬಾಡಿಗೆಗೆ ಪಡೆದುಕೊಂಡಿದ್ದ. ಕೇವಲ 3 ತಿಂಗಳು ಅಂಗಡಿ ನಡೆಸಿ ಲಾಸ್ ಆಗುತ್ತಿದೆ ಅಂಗಡಿ ಬಂದ್ ಮಾಡುತ್ತೇನೆ. ಹಣ ಮರಳಿಸುವಂತೆ ಕೇಳಿದ. ಸತೀಶ ಹಣ ಕೊಡಲು ಒಪ್ಪದೇ ಇದ್ದಾಗ ನಿತೇಶ ಹಾಗೂ ಸತೀಶ ನಡುವೆ 3-4 ಬಾರಿ ಗಲಾಟೆ ಆಗಿದೆ. ನಂತರ ₹3.40 ಲಕ್ಷ ಸತೀಶ ಮರಳಿಸಿದ್ದಾನೆ. ಉಳಿದ 60 ಸಾವಿರ ಕೊಡುವಂತೆ ನಿತೇಶ ಕೇಳಿದ್ದಾನೆ. ಆದರೆ ಕೊಟ್ಟಿರಲಿಲ್ಲ. ₹60 ಸಾವಿರ ಕೊಟ್ಟಿಲ್ಲ ಎಂದು ಊರೆಲ್ಲ ಪ್ರಚಾರ ಮಾಡುತ್ತೀಯಾ ಎಂದು ಸತೀಶ ಕೇಳಿದ್ದಾನೆ. ಏ.6ರಂದು ಹೊಟೇಲ್ ಗೆ ನಿತೇಶ ಹಾಗೂ ನಿತ್ಯಾನಂದನನ್ನು ಸತೀಶ ಕರೆಸಿಕೊಂಡು, ಅಪಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ ಮತ್ತೆ ಗಲಾಟೆ ಆಗಿದೆ. ಆಗ ನಿತೇಶ ಹಲ್ಲೆ ಮಾಡಿದ್ದಾನೆ. ಏ.17ರಂದು ಗೋವಾದ ಪೊಲೋಲೆಂ ಬೀಚಿನಲ್ಲಿ ನಿತೇಶ, ನಿತ್ಯಾನಂದ, ಸುರೇಂದ್ರ ಮೂವರು ಸೇರಿ ಸತೀಶ ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದಾರೆ. ಅಂದಿನಿಂದ ನಿತೇಶ ಚೂರಿ ಹಿಡಿದು ಹತ್ಯೆಗಾಗಿ ಕಾಯುತ್ತಿದ್ದ. ಭಾನುವಾರ ಮಾರುಕಟ್ಟೆಗೆ ಸತೀಶ ಕೊಳಂಬಕರ ಕಾಯಿಪಲ್ಲೆ ಖರೀದಿಗೆ ಬಂದಿದ್ದ. ನಿತೇಶನೂ ಬಂದಿದ್ದ. ಆ ಸಂದರ್ಭದಲ್ಲಿ ಗಲಾಟೆ ಆಗಿ ಮೂರು ಬಾರಿ ಚೂರಿಯಿಂದ ಇರಿದ ನಿತೇಶ ಬಸ್ ನಿಲ್ದಾಣ ಸಮೀಪದ ತನ್ನ ಅಜ್ಜಿ ಮನೆಗೆ ಹೋಗಿ ಮಾವನ ಫೋನ್ ನಿಂದ ನಿತ್ಯಾನಂದನಿಗೆ ಕರೆ ಮಾಡಿ ಆತನನ್ನೂ ಕರೆದುಕೊಂಡು ಗೋವಾಕ್ಕೆ ಪರಾರಿಯಾಗಿದ್ದಾನೆ. ಅಲ್ಲಿ ಸುರೇಂದ್ರನನ್ನು ಕರೆಸಿಕೊಂಡು ಗೋವಾದ ಕಲ್ಲಂಗೂಟ ಬೀಚಿನ ಬಾರೊಂದರಲ್ಲಿ ಕುಳಿತು ಪಾರ್ಟಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೋಮವಾರ ಸಂಜೆ ಪೊಲೀಸರು ಗೋವಾಕ್ಕೆ ತೆರಳಿ ನಿತೇಶನನ್ನು ಬಂಧಿಸಿ ಕರೆತಂದಿದ್ದಾರೆ.

ಆರೋಪಿಗಳ ಬೈಕ್ ವಶಪಡಿಸಿಕೊಳ್ಳಲು ಪುನಃ ಗೋವಾಕ್ಕೆ ಕರೆದೊಯ್ದು ಮರಳುವಾಗ ಮಾಜಾಳಿ ಚೆಕ್ ಪೋಸ್ಟ್ ಬಳ ದೇವತಿ ದೇವಾಲಯದ ಬಳಿ ಬರುತ್ತಿದ್ದಂತೆ ತನಗೆ ಶುಗರ್ ಇದೆ. ಮೂತ್ರ ಬರುತ್ತಿದೆ ಎಂದು ವಾಂತಿ ಮಾಡಲು ಯತ್ನಿಸಿದಾಗ ಪೊಲೀಸರು ವಾಹನ ನಿಲ್ಲಿಸಿ ಮೂತ್ರ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಆಗ ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಪೊಲೀಸರಾದ ಹಸನ್ ಕುಟ್ಟಿ, ಗಿರೀಶಯ್ಯನ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಎಸ್ ಐ ಕುಮಾರ ಕಾಂಬಳೆ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ನಿತೇಶನನ್ನು ಚಿಕಿತ್ಸೆಗಾಗಿ ಕಿಮ್ಸ್ ಗೆ ಕರೆದೊಯ್ಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎಂ. ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ