ಕೃಷಿ ಅನುಷ್ಠಾನದಲ್ಲಿ ಚಿತ್ರದುರ್ಗಕ್ಕೆ ಮೂರು ಪ್ರಶಸ್ತಿ

KannadaprabhaNewsNetwork |  
Published : May 30, 2024, 12:51 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್  | Kannada Prabha

ಸಾರಾಂಶ

ಕೃಷಿ ಅನುಷ್ಠಾನದಲ್ಲಿ ಚಿತ್ರದುರ್ಗ ಜಿಲ್ಲೆಗೆ ಮೂರು ಪ್ರಶಸ್ತಿ ಬಂದಿರುವ ಹಿನ್ನಲೆ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಕೃಷಿ ಇಲಾಖಾ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆ ಮೂರು ಪ್ರಶಸ್ತಿ ಬಾಚಿಕೊಂಡಿದ್ದು, ಬೆಂಗಳೂರಿನಲ್ಲಿ ನಡೆದ ರಾಜ್ಟಮಟ್ಟದ ಕಾರ್ಯಾಗಾರದಲ್ಲಿ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಲಾಗಿದೆ.

2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆ, ಕಾರ್ಯಕ್ರಮಗಳ ಸಮಗ್ರ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚಿತ್ರದುರ್ಗ ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪ್ರಥಮ ಸ್ಥಾನ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.

ಕೃಷಿ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸಿ ತಾಂತ್ರಿಕ ಮಾಹಿತಿ ಒದಗಿಸಿ, ಬರಗಾಲದ ಪರಿಸ್ಥಿತಿಯಲ್ಲಿ ಸಹಿತ ಇಳುವರಿ ಪಡೆದು, ಜೀವನ ನಿರ್ವಹಣೆಗೆ ಸುಲಲಿತಗೊಳಿಸಲು ರೈತರಿಗೆ ಭರವಸೆ ನೀಡಿದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಎರಡನೇ ಅತ್ಯುತ್ತಮ ಜಿಲ್ಲೆಯೆಂದು ಪ್ರಶಸ್ತಿ ಪಡೆದಿದೆ.

“ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ”, “ಮಣ್ಣಿನ ಆರೋಗ್ಯದಿಂದ ಬೆಳೆಗಳ ಆರೋಗ್ಯ - ನಮ್ಮ ಆರೋಗ್ಯ” ಘೋಷಣೆಯಡಿ ಮಣ್ಣು ಅಭಿಯಾನ ಕಾರ್ಯಕ್ರಮ ಆಯೋಜಿಸಿ ರಸಗೊಬ್ಬರಗಳ ಸಮರ್ಥ ಬಳಕೆ ಕುರಿತು ಸಕಾಲದಲ್ಲಿ ಮಾಹಿತಿ ನೀಡಿದ ಹಿನ್ನಲೆ ಮಣ್ಣು ಆರೋಗ್ಯ ಕೇಂದ್ರ ಚಿತ್ರದುರ್ಗವು ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿದೆ.

ಮಣ್ಣು ಹಾಗೂ ನೀರು ಸಂರಕ್ಷಣೆ ಕುರಿತು ಜಲಾನಯನ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ, ಅರಣ್ಯ ಹಾಗೂ ತೋಟಗಾರಿಕೆ ಚಟುವಟುಕೆಗಳ ಮೂಲಕ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದರ ಜೊತೆಗೆ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ ಉತ್ತಮ ಪ್ರಗತಿ ಸಾಧಿಸಿದ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಮತ್ತೊಂದು ಗರಿ ಮುಡಿಗೇರಿಸಿಕೊಂಡಿದೆ.

ಪ್ರಶಸ್ತಿಗೆ ಭಾಜನರಾದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಜಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅವರಿಗೆ ಅಭಿನಂದಿಸಿದರು.

ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಉಪ ಕೃಷಿ ನಿರ್ದೇಶಕ ಶಿವಕುಮಾರ್, ಪ್ರಭಾಕರ್ ಸೇರಿದಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು, ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು, ವಿಷಯ ತಜ್ಞರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ