ಹೊರಗುತ್ತಿಗೆಯಲ್ಲಿ ಮೀಸಲಾತಿ, ಎಸ್ಸಿ-ಎಸ್ಟಿಗಳಿಗೆ ಅನ್ಯಾಯ: ಡಿ.ಎಸ್. ಮಾಳಗಿ

KannadaprabhaNewsNetwork | Published : May 30, 2024 12:51 AM

ಸಾರಾಂಶ

ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆ ಆಯ್ಕೆ ಮಾಡಿಕೊಳ್ಳುವ ವೇಳೆ ಮೀಸಲಾತಿ ಅನುಸರಿಸುವ ಸರ್ಕಾರದ ನಿರ್ಣಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರೋಧಿಯಾಗಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮತ್ತಿತರ ದಲಿತ ಮುಖಂಡರು ಆಕ್ಷೇಪಿಸಿದ್ದಾರೆ.

ಹಾವೇರಿ: ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆ ಆಯ್ಕೆ ಮಾಡಿಕೊಳ್ಳುವ ವೇಳೆ ಮೀಸಲಾತಿ ಅನುಸರಿಸುವ ಸರ್ಕಾರದ ನಿರ್ಣಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿರೋಧಿಯಾಗಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮತ್ತಿತರ ದಲಿತ ಮುಖಂಡರು ಆಕ್ಷೇಪಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ತುಂಬಲು ಹಾಗೂ ೨೦ ಸಿಬ್ಬಂದಿ ತುಂಬುವ ಸಂದರ್ಭದಲ್ಲಿ ಮೀಸಲಾತಿ ಅನುಸರಿಸುತ್ತೇವೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಗುಮಾಸ್ತ, ಡಿ ಹುದ್ದೆ ತುಂಬುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಜನಾಂಗದವರನ್ನು ಟೆಂಡರ್ ಪಡೆದ ಏಜನ್ಸಿಯವರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಸರ್ಕಾರದ ನಿರ್ಣಯ ಪರಿಶಿಷ್ಟ ಜಾತಿಯವರಿಗೆ ಘೋರ ಅನ್ಯಾಯ ಮಾಡಿ ಗುತ್ತಿಗೆದಾರರನ್ನು ಶ್ರೀಮಂತರನ್ನಾಗಿ ಮಾಡಿ ಅವರಿಂದ ಕಿಕ್ ಬ್ಯಾಕ್ ಪಡೆದುಕೊಳ್ಳುವ ಸಂದರ್ಭ ಬಂದರೂ ಬರಬಹುದು.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಯಲ್ಲಿ ಹತ್ತಾರು ಸಾವಿರ ಪೌರಕಾರ್ಮಿಕರ ಹುದ್ದೆ ಖಾಲಿ ಇದ್ದು, ಅವುಗಳನ್ನು ಕೂಡಲೇ ಭರ್ತಿ ಮಾಡಬೇಕು. ರಾಜ್ಯದಲ್ಲಿ ಲಕ್ಷಾಂತರ ಬ್ಯಾಕ್‌ಲಾಗ್ ಹುದ್ದೆ ಖಾಲಿ ಇದ್ದರೂ ಆ ಹುದ್ದೆಯನ್ನು ತುಂಬಿಕೊಳ್ಳಲು ಯಾವುದೇ ನಿರ್ಣಯ ಮಾಡಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ದಲಿತ, ಹಿಂದುಳಿದವರ ಪರ, ಬಸವತತ್ವದ ಪರಿಪಾಲಕ, ಸಾಮಾಜಿಕ ನ್ಯಾಯದ ಹರಿಕಾರ ಎಂದು ತಮ್ಮನ್ನು ಕೆಲವೊಂದು ವೇದಿಕೆಯಲ್ಲಿ ಬಣ್ಣಿಸಿಕೊಳ್ಳುತ್ತಾರೆ. ಆ ಪ್ರಕಾರ ಸಿಎಂ ನಡೆಯುವುದಾದರೆ ಅವರು ಹೊರಡಿಸಿದ ಹೊರಗುತ್ತಿಗೆಯಲ್ಲಿ ಮೀಸಲು ಆದೇಶ ರದ್ದುಪಡಿಸಿ, ಸರ್ಕಾರಿ, ಅರೇಸರ್ಕಾರಿ ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರಿ ಮೀಸಲಾತಿ ನಿಯಮದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆದೇಶ ನೀಡಬೇಕು.

ರಾಜ್ಯದಲ್ಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಸರ್ಕಾರ ನಿರ್ಣಯಿಸಬೇಕು. ನಿರ್ಣಯ ಮಾಡದೇ ಇದ್ದಲ್ಲಿ ಮುಂಬರುವ ದಿನಮಾನಗಳಲ್ಲಿ ಪರಿಶಿಷ್ಟ ಜಾತಿ, ಜನಾಂಗ, ಹಿಂದುಳಿದ ವರ್ಗಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಅಶೋಕ ಮರೆಯಣ್ಣನವರ, ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷ ನಾಗರಾಜ ಮಾಳಗಿ, ಜಿಲ್ಲಾ ಮಾದಿಗರ ದಂಡೋರ ಸಮಿತಿ ಅಧ್ಯಕ್ಷ ಸುಭಾಸ ಬೆಂಗಳೂರು, ಪ್ರಮುಖರಾದ ಶಿವಾನಂದ ನಾಗಮ್ಮನವರ, ಮಲ್ಲೇಶ ನೆಲ್ಲೂರ, ಗುಡ್ಡಪ್ಪ ಬಣಕಾರ, ರಾಜು ಮಾದರ, ಆನಂದ ಎಂ.ಎಂ., ಮಲ್ಲೇಶ ಕಡಕೋಳ ಮತ್ತಿತರರು ಎಚ್ಚರಿಸಿದ್ದಾರೆ.

Share this article